ಜಿಲ್ಲೆ

ಪ್ರತಿ ತಿಂಗಳು ಕಡತ ವಿಲೇವಾರಿ: ತಹಸೀಲ್ದಾರ್ ಎಂ.ವಿ.ರೂಪಾ ಮಾಹಿತಿ

reportermys

ಕೆ.ಆರ್.ಪೇಟೆ: ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ನಡೆಯುತ್ತಿರುವ ಕಡತ ವಿಲೇವಾರಿ ಆಂದೋಲನ 3ನೇ ದಿನವೂ ಮುಂದುವರಿದಿದ್ದು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ನಿಗದಿಪಡಿಸಿದ ಕೌಂಟರ್‌ಗೆ ತೆರಳಿ ಅರ್ಜಿ ಸಲ್ಲಿಸಿದರು.

ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ಇದುವರೆಗೂ ಬಾಕಿಯಿದ್ದ ರೈತರ ಎಲ್ಲ ಹಳೇ ಕಡತಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅರ್ಜಿ ಸ್ವೀಕರಿಸಿದ ನಂತರ ಸಂಬಂಧಪಟ್ಟ ವಿಷಯ ನಿರ್ವಾಹಕರು, ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಮತ್ತು ಉಪ ತಹಸೀಲ್ದಾರ್‌ಗಳು ರೈತರ ಕಡತಗಳ ಸ್ಥಿತಿ ಪರಿಶೀಲಿಸಿ ಪರಿಹರಿಸಲಿದ್ದಾರೆ. ಇಲ್ಲಿ ಸಾಧ್ಯವಾಗದಿದ್ದರೆ ಮುಂದಿನ ಹಂತಗಳಿಗೆ ಕಳುಹಿಸಲಾಗುವುದು. ಕಡತಗಳನ್ನು ಸರಿಪಡಿಸಿ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲದ ಪ್ರಕರಣಗಳಲ್ಲಿ ಹಿಂಬರಹ ನೀಡಲಾಗುವುದು. ನ್ಯಾಯಾಲಯದ ಪ್ರಕರಣಗಳಿಗೆ ಕಂದಾಯ ಇಲಾಖೆ ಜವಾಬ್ದಾರಿಯಾಗಲ್ಲ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಾಡಕಚೇರಿಗಳಲ್ಲಿ ಕಡತ ವಿಲೇವಾರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಹಸೀಲ್ದಾರ್ ಇದೇ ವೇಳೆ ತಿಳಿಸಿದರು. ಆಂದೋಲನಕ್ಕೆ ಆಗಮಿಸಿದ್ದ ಎಲ್ಲ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.