ರಬಕವಿ&ಬನಹಟ್ಟಿ:ಬನಹಟ್ಟಿಯ ಆರಾಧ್ಯ ದೈವ ಕಾಡಸಿದ್ಧೇಶ್ವರ ಜಾತ್ರೆ ಸೆ.16 ರಂದು ಸಂಜೆ 8 ಗಂಟೆಗೆ ತೇರು ಎಳೆಯುವ ಮೂಲಕ ಪ್ರಾರಂಭವಾಗಲಿದೆ. ನಗರದ ಎಲ್ಲೆಡೆ ಸಡಗರ, ಸಂಭ್ರಮ ಮನೆ ಮಾಡಿದೆ.ಸೆ.17 ರಂದು ಕಾಡಸಿದ್ಧೇಶ್ವರರಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಲಿದೆ. ಮಧ್ಯಾಹ್ನ 3 ರಿಂದ ರಾತ್ರಿ 8 ರ ವರೆಗೆ ರಾಷ್ಟ್ರಮಟ್ಟದ ಕುಸ್ತಿಗಳು ನಡೆಯಲಿವೆ. ಸೆ.18 ರಂದು ತೇರಿನಿಂದ ಕಲಶ ಇಳಿಸಲಾಗುವುದು. ಅಂದು ಕಾಡಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಂದಿರಕ್ಕೆ ಮರಳ್ದಿ ನಂತರ ಜಾತ್ರೆ ಸಂಪನ್ನಗೊಳ್ಳಲಿದೆ. ಈ ಭಾಗದಲ್ಲಿ ಇದು ವರ್ಷದ ಕೊನೆಯ ಜಾತ್ರೆಯಾಗಿರುವುದರಿಂದ ಬರೋಬ್ಬರಿ ಒಂದು ತಿಂಗಳು ಜರುಗಲಿದೆ.
ಪರಂಪರೆ: ಸಹ್ಯಾದ್ರಿ ಪರ್ವತ ಶ್ರೇಣಿಗಳ ಮೊದಲ ಮೆಟ್ಟಿಲು ಎಂಬಂತಿರುವ ಕೊಲ್ಲಾಪುರ ಬಳಿಯ ಕನ್ಹೇರಿ ಗ್ರಾಮ ಪರಿಸರದಲ್ಲಿ ಸಿದ್ಧಗಿರಿ ಕಾಡಸಿದ್ಧೇಶ್ವರ ಮಠ ಕ್ರಿಶ 12 ರಿಂದ 14 ರಲ್ಲಿ ಸ್ಥಾಪಿತವಾಗಿದೆ. ಕಾಡಸಿದ್ಧೇಶ್ವರರು ಸಿದ್ಧಗಿರಿ ಮಠದ ಪರಂಪರೆಯ ಮೂಲ ಪುರುಷರು. ಈ ಪೀಠ ಪರಂಪರೆಯ ಚರಜಂಗಮರು ನಾಡಿನಾದ್ಯಂತ ಸಂಚರಿಸಿ ಅಲ್ಲಲ್ಲಿ ಸ್ಥಾಪಿಸಿರುವ 360 ಮಠ, ಮಂದಿರಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ ಬನಹಟ್ಟಿಯ ಕಾಡಸಿದ್ಧೇಶ್ವರ ಮಂದಿರವೂ ಒಂದು. ಬನಹಟ್ಟಿಯ ಎತ್ತರದ ಗುಡ್ಡದಲ್ಲಿ ಕಾಡಸಿದ್ಧೇಶ್ವರರು ನೆಲೆ ನಿಂತಿದ್ದು, ಅಲ್ಲೊಂದು ಸುಂದರ ಮಂದಿರ ತಲೆ ಎತ್ತಿದೆ. ಕಾಡಸಿದ್ಧೇಶ್ವರರು ವೀರಶೈವ ಧರ್ಮ ಪ್ರವರ್ತಕರು. ಗುರು ಸಂಗಮೇಶ್ವರ ದೇವರಿಂದ ಅನುಗ್ರಹಿತರಾಗಿ, ಶಿವಯೋಗ ಸಾಧನೆಗೈದು ತಮ್ಮ 500 ಬೆಡಗಿನ ವಚನಗಳಲ್ಲಿ ಜೀವತತ್ವ ಹಾಗೂ ಶಿವತತ್ವ ಸಂಯೋಗಗೊಳಿಸಿ ತಮ್ಮನ್ನು ಶೂನ್ಯದಲ್ಲಿ ನಿರಾಳವಾಗಿಸಿಕೊಂಡ ಶಿವಯೋಗಿಯಾಗಿದ್ದಾರೆ.
ಪವಾಡ ಪುರುಷ ಕಾಡಸಿದ್ಧೇಶ್ವರರ ನಂತರ 26 ಜಂಗಮ ಪೀಠಾಧಿಕಾರಿಗಳು ಪರಂಪರೆಯ ಜವಾಬ್ದಾರಿಯನ್ನು ಮುನ್ನಡೆಸುತ್ತ ಇತಿಹಾಸವಾಗಿದ್ದಾರೆ. ಈಗ ಕೊಲ್ಲಾಪುರದಲ್ಲಿರುವ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರರು 27ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡಿದ್ದು, ಶ್ರೀಮಠದ ಐತಿಹಾಸಿಕ ನೆಲೆ, ಬೀಡಿನ ಅಧ್ಯಯನ ನಡೆಸಿ ತಮ್ಮ ಆಧ್ಯಾತ್ಮಿಕ ಕಾರ್ಯ ವ್ಯಾಪ್ತಿಯನ್ನು ರಚನಾತ್ಮಕವಾಗಿ ವಿಸ್ತರಿಸಿದ್ದಾರೆ.
ರೊಟ್ಟಿ ಜಾತ್ರೆ; ಪ್ರಸಕ್ತ ವರ್ಷ ರೊಟ್ಟಿ ಜಾತ್ರೆ ಕೂಡ ನಡೆಯುತ್ತಿರುವುದು ವಿಶೇಷವಾಗಿದೆ. ಜಾತ್ರೆಗೆ ಬಂದ ಭಕ್ತರಿಗೆ ಜೋಳದ ರೊಟ್ಟಿ ಹಾಗೂ ಸಾಂಬಾರ ದಾಸೋಹ ಮೂರು ದಿನ ಜರುಗಲಿದೆ. ಜಾತ್ರೆಗಾಗಿ 3 ಲಕ್ಕೂ ಅಧಿಕ ರೊಟ್ಟಿ ಸಂಗ್ರಹವಾಗುವ ನಿರೀಕ್ಷೆ ಇದೆ.ಪಟಾಕಿ ಜಾತ್ರೆ: ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ರಥೋತ್ಸವ ವೇಳೆ ಪಟಾಕಿ ಸುಡುವ ವಾಡಿಕೆ ಇದೆ. ಉತ್ಸವದಲ್ಲಿ ಅಂದಾಜು 80 ಲಕ್ಕೂ ಅಧಿಕ ಮೊತ್ತದ ಪಟಾಕಿಯನ್ನು ಸುಡುತ್ತಾರೆ. ನಂತರ ನಗರದ ಹಿರಿಯರು, ರಾಜಕೀಯ ಮುತ್ಸದ್ದಿಗಳು ರಥದಲ್ಲಿರುವ ಕಾಡಸಿದ್ಧೇಶ್ವರರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡುತ್ತಾರೆ.
ಜಂಗಿ ನಿಕಾಲಿ ಕುಸ್ತಿ: ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಸೆ.17 ರಂದು ಸಂಜೆ 3 ಗಂಟೆಗೆ ಅಂತಾರಾಷ್ಟ್ರೀಯ ಕುಸ್ತಿ ಪಟುಗಳ ಮಲ್ಲಯುದ್ಧ ನಡೆಯಲಿದೆ. ದೇಶದ ಹೆಸರಾಂತ ಕುಸ್ತಿ ಪಟುಗಳು ಪಾಲ್ಗೊಳ್ಳಲಿದ್ದಾರೆ.
ಬನಹಟ್ಟಿ ಕಾಡಸಿದ್ಧೇಶ್ವರ ದೇವರು.