ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯಕ್ಕೆ ಬರುತ್ತಿದ್ದ ಆನೆಯನ್ನು ಕಾಡಿಗಟ್ಟಲು ಮುಂದಾದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ತಿರುಗಿಬಿದ್ದಿರುವುದು. 
ಜಿಲ್ಲೆ

ಕಾಡಿಗಟ್ಟಲು ಮುಂದಾದ ಸಿಬ್ಬಂದಿ ಹಿಮ್ಮೆಟ್ಟಿಸಿದ ಕಾಡಾನೆ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ದೇವಾಲಯದತ್ತ ಬರುತ್ತಿದ್ದ ಕಾಡಾನೆಯನ್ನು ಕಾಡಿಗಟ್ಟಲು ಮುಂದಾದ ಅರಣ್ಯ ಸಿಬ್ಬಂದಿಯನ್ನೇ ಕಾಡಾನೆ ಹಿಮ್ಮೆಟ್ಟಿಸಿದ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕಳೆದ ಏಳೆಂಟು ವರ್ಷಗಳಿಂದರೂ ಕಾಡಾನೆಯೊಂದು ಬರುತ್ತಿದೆ. ಮಧ್ಯಾಹ್ನದ ವೇಳೆಗೆ ದೇವಾಲಯಕ್ಕೆ ಪ್ರಸಾದಕ್ಕಾಗಿ ಬರುವ ಆನೆಯನ್ನು ಭಕ್ತರು ಗೋಪಾಲ ಎಂದು ಕರೆಯುತ್ತಿದ್ದಾರೆ. ಸದಾ ಪ್ರವಾಸಿಗರಿಂದ ಗಿಜಿಗುಡುವ ದೇವಾಲಯದ ಸಮೀಪಕ್ಕೆ ಆನೆ ಬರುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿದೆ.
ಕಾಡಿನಿಂದ ದೇವಾಲಯದತ್ತ ಬರುತ್ತಿದ್ದ ಆನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಮತ್ತೆ ಕಾಡಿಗೆ ಮರಳಿಸಲು ಮುಂದಾದಾಗ ಕಾಡಾನೆ ಅರಣ್ಯ ಸಿಬ್ಬಂದಿಯನ್ನೇ ಹಿಮ್ಮೆಟ್ಟಿಸಿತು. ಕೂದಲೆಳೆ ಅಂತರದಲ್ಲಿ ಅರಣ್ಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದ ಘಟನೆಯನ್ನು ಪ್ರವಾಸಿಗರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದು ಗೋಪಾಲಸ್ವಾಮಿ ಬೆಟ್ಟದಲ್ಲಿ ಸೆರೆಹಿಡಿದ ನಾಲ್ಕಾರು ವರ್ಷಗಳ ಹಳೆಯ ವಿಡಿಯೋ ಆಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.