ಬೂದಿಕೋಟೆ: ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭಾನುವಾರ ರಾತ್ರಿ 8 ಕಾಡಾನೆಗಳ ಹಿಂಡು ದಾಳಿ ಮಾಡಿ ಟೊಮ್ಯಾಟೊ ಇನ್ನಿತರ ಬೆಳೆಗಳನ್ನು ನಾಶ ಮಾಡಿವೆ.
ಹೋಬಳಿಯ ಬೊಮ್ಮಗಾನಹಳ್ಳಿ ರೈತ ಕಣ್ಣಪ್ಪ ಅವರ ಒಂದೂವರೆ ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆ ಹಾನಿ ಮಾಡಿದೆ. ಪಚ್ಚಾರ‌್ಲಹಳ್ಳಿ ಮುನಿರಾಜು ಅವರ ತೆಂಗಿನ ಮರ, ಬಾಳೆಗಿಡ ನಾಶ ಮಾಡಿದೆ. ಕಾಮಸಮುದ್ರ ಕಡೆ ಹೋಗಿರುವ ಆನೆಗಳು ಮಾರ್ಗ ಮಧ್ಯೆ ಬೆಳೆ ನಾಶ ಮಾಡಿವೆ.
ಮೂರು ವಾರಗಳ ಹಿಂದೆ ಬಂದಿದ್ದ 8 ಕಾಡಾನೆಗಳು ಚದುರಿಹೋಗಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ಪ್ರದೇಶಕ್ಕೆ ಓಡಿಸಿ ಒಟ್ಟುಗೂಡಿಸಿದ್ದರಲ್ಲದೆ ರಾತ್ರಿ ವೇಳೆ ತಮಿಳುನಾಡಿಗೆ ಅಟ್ಟಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಆನೆಗಳು ಬೊಮ್ಮಗಾನಹಳ್ಳಿಯಿಂದ ಕಾಮಸಮುದ್ರದ ಬರುವ ಮೂಲಕ ಅರಣ್ಯ ಇಲಾಖೆಯ ಲೆಕ್ಕಾಚಾರ ತಲೆಕೆಳಗು ಮಾಡಿದೆ.