ಕಾಮಸಮುದ್ರ: ಕರೊನಾದಿಂದ ಹೈರಾಣಾಗಿರುವ ಸಂದಿಗ್ಧ ಸಮಯದಲ್ಲಿ ಗಡಿ ಭಾಗದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಕಾಡಾನೆಗಳು ದಾಳಿ ಮಾಡಿ ಲಕ್ಷಾಂತರ ರೂಗಳ ಬೆಳೆ ನಾಶ ಮಾಡಿವೆ.
ಹೋಬಳಿಯ ತೊಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯ ಚಾಮನಹಳ್ಳಿಯಲ್ಲಿ ರಾಮಚಂದ್ರರೆಡ್ಡಿ ಅವರ 4 ಎಕರೆಯಲ್ಲಿ ಬೆಳೆದಿದ್ದ ಮಾವಿನ ತೋಟಕ್ಕೆ ಲಗ್ಗೆಯಿಟ್ಟಿರುವ ಆನೆಗಳ ಹಿಂಡು ಫಸಲಿಗೆ ಬಂದಿದ್ದ ಸುಮಾರು 200 ಮಾವಿನ ಗಿಡಗಳನ್ನು ನಾಶಗೊಳಿಸಿವೆ.
ಮಾವಿನ ಗಿಡಗಳು ಸೇರಿ ಸುತ್ತಮುತ್ತಲಿನ ಟೊಮ್ಯಾಟೊ ಮತ್ತು ಬಾಳೆಗಿಡ ನಾಶ ಮಾಡಿವೆ. ಮಾವಿನ ಗಿಡ ಪೋಷಿಸಲು ಲಕ್ಷಾಂತರ ವ್ಯಯಿಸಲಾಗಿದೆ. ಸಮೃದ್ದವಾಗಿ ಫಸಲು ಬಂದಿದೆ, ಆದರೆ ಆನೆಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಕಾಡಾನೆಗಳು ತಮಿಳುನಾಡಿನ ಕೃಷ್ಣಗಿರಿ ಅರಣ್ಯದಿಂದ ಆಹಾರಕ್ಕಾಗಿ ಬರುವಾಗ ಕಾಮಸಮುದ್ರ ಅರಣ್ಯ ವ್ಯಾಪ್ತಿಯಲ್ಲೇ ಬೀಡು ಬಿಟ್ಟು ಸಂತಾನೋತ್ಪತ್ತಿ ಮಾಡುವುದರಿಂದ ಈ ಸಮಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ತೋಟಗಳಿಗೆ ನುಗ್ಗಿ ಬೆಳೆ ನಾಶಗೊಳಿಸುತ್ತಿವೆ. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಸೌಜನ್ಯಕ್ಕೂ ಗಡಿಭಾಗದ ಗ್ರಾಮಗಳತ್ತ ನುಸುಳದಿರುವುದು ವಿಪರ್ಯಾಸವೇ ಸರಿ.
ಹೆಸರಿಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ. ಆದರೆ ನಷ್ಟಕ್ಕೆ ಸರಿಯಾಗಿ ಪರಿಹಾರ ಕೊಡುವುದಿಲ್ಲ. ಪದೇ ಪದೆ ಆನೆ ದಾಳಿಯಿಂದಾಗುತ್ತಿರುವ ನಷ್ಟ ತಪ್ಪಿಸಲು ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ರಾಮಚಂದ್ರರೆಡ್ಡಿ, ಚಾಮನಹಳ್ಳಿ ರೈತ
ಕಾಡಾನೆ ದಾಳಿಗೆ ಬೆಳೆ ನಾಶ: ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿ, ಕೊತ್ತೂರು ಹಾಗೂ ಸುತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಬೆಳಗಿನ ಜಾವ 4 ಕಾಡಾನೆಗಳು ದಾಳಿ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ, ಜೋಳ, ನೀರಿನ ಪೈಪ್ ನಾಶವಾಗಿವೆ. ಗುಲ್ಲಹಳ್ಳಿಯ ರೈತ ಗೋವಿಂದಪ್ಪ ಅವರ ಟೊಮ್ಯಾಟೊ ಹಾಗೂ ನೀರಿನ ಪೈಪ್, ಸಿ.ವಿ.ನಾಗರಾಜ ಅವರ ಟೊಮ್ಯಾಟೊ ಹಾಗೂ ಾರಂ ಹುಲ್ಲು, ಶಿವಣ್ಣ, ನಾಗರಾಜ್ ಹಾಗೂ ಶಂಕರ ಅವರ ಟೊಮ್ಯಾಟೊ ಬೆಳೆ ಮತ್ತು ಕೊತ್ತೂರು ಗ್ರಾಮದ ರೈತ ತಿಪ್ಪಣ್ಣರ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಟೊಮ್ಯಟೊ, ಮುರುಗೇಶ ಅವರ ಟೊಮ್ಯಾಟೊ ಮತ್ತು ಜೋಳದ ಬೆಳೆ ನಾಶವಾಗಿದೆ.