ಜಿಲ್ಲೆ

ಕದನ ಕಲಿಗಳಿಗೆ ಗೌರವ

ಮಡಿಕೇರಿ:

ಒಬ್ಬ ಉತ್ತಮ ಸೇನಾನಿ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸಲು ಧನಾತ್ಮಕ ಚಿಂತನೆ, ಸಮಗ್ರತೆ, ಸ್ವಯಂ ನಿಯಂತ್ರಣವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಏರ್ ಮಾರ್ಷಲ್ ನಂದ ಕಾರ್ಯಪ್ಪ ಹೇಳಿದರು. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಸೋಮವಾರ ನಡೆದ "ಕದನ ಕಲಿಗಳಿಗೆ ಗೌರವ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಮಾಜಿ ಸೈನಿಕರ ಕುಂದುಕೊರತೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನದಲ್ಲಿದ್ದು, ಅವರು ಸ್ಪಂದಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ರಾಷ್ಟ್ರಪತಿಗಳ ಗೌರವ ಚಿಕಿತ್ಸಕರಾದ ಲೆ.ಜ. ಡಾ. ಬಿ.ಎನ್ ಬಿ.ಎಂ.ಪ್ರಸಾದ್ ಮಾತನಾಡಿ, ಸಮವಸ್ತ್ರದಲ್ಲೇ ದೇಶ ಸೇವೆ ಮಾಡಬೇಕೆಂದೇನಿಲ್ಲ, ವಿದ್ಯಾಭ್ಯಾಸ ಹಾಗೂ ಜೀವನದ ಅನೇಕ ಕ್ಷೇತ್ರದಲ್ಲಿ ಪ್ರಾಮಾಣಿಕ, ಪಾರದರ್ಶಕ, ಶಿಸ್ತಿನ ಕರ್ತವ್ಯ ನಿರ್ವಹಿಸಿ ಕೀರ್ತಿತರಬಹುದು ಎಂದು ಹೇಳಿದರು.
ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ.ರಾಜೇಂದ್ರ ಮಾತನಾಡಿ, ಕೊಡಗು ವೀರರ ಭೂಮಿ. ತ್ಯಾಗ ಬಲಿದಾನ ಮಾಡಿದ ಅನೇಕ ಯೋಧರು ಕೊಡಗಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾರ್ಗೀಲ್ ಕದನದ ಸಂದರ್ಭ ವೀರ ಮರಣವನ್ನಪ್ಪಿದ ಕೊಡಗಿನ ಯೋಧರ ಪಾರ್ಥಿವ ಶರೀರ ಜಿಲ್ಲೆಗೆ ಆಗಮಿಸಿದಾಗ ಪ್ರತಿಯೊಬ್ಬರು ತಮ್ಮ ಮನೆಯ ವ್ಯಕ್ತಿಯಂತೆ ಶ್ರದ್ಧಾಂಜಲಿ ಸಲ್ಲಿಸಿರುವುದು ಅವಿಸ್ಮರಣೀಯ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ವೀರಯೋಧರು ತಮ್ಮ ಬದುಕನ್ನು ದೇಶಸೇವೆಗೆ ಮುಡುಪಾಗಿಟ್ಟಿದ್ದಾರೆ. ಅವರ ನಿಸ್ವಾರ್ಥ ಸೇವೆ ವಿಶಿಷ್ಟ. ಅವರಿಗೆ ನಿರಂತರ ಗೌರವ ಸಲ್ಲಿಸುವಂತಾಗಬೇಕು ಎಂದು ಹೇಳಿದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಕಾಫಿ,ಸೇನೆ,ಕ್ರೀಡೆ ಗೆ ಹೆಸರುವಾಸಿಯಾಗಿರುವ ಕೊಡಗು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ದೇಶದಲ್ಲೆ ಮಾದರಿ ಎನಿಸಿಕೊಂಡಿದೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಟ್ಟ ಹಿರಿಯ ಪ್ರಾಥಮಿಕ ಶಾಲೆಯ ಅಲಿಮಾ ನೇತೃತ್ವದ ತಂಡ ಹಾಗೂ ಎಸ್‌ಎಂಎಸ್ ಶಾಲೆಯ ಮೈಥಿಲಿರಾವ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ರೆಜಿತ್‌ಕುಮಾರ್,ಚೋಕಿರ ಅನಿತಾ,ಆನಂದ್ ಕೊಡಗು ಬೊಳ್ಳಜಿರ ಬಿ.ಅಯ್ಯಪ್ಪ ಇದ್ದರು.

ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ನಂದ ಕಾರ್ಯಪ್ಪ, ಲೆ.ಜ. ಡಾ. ಬಿ.ಎನ್ ಬಿ.ಎಂ ಪ್ರಸಾದ್, ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ, ಕರ್ನಲ್ ಪೋರೆಯಂಡ ಬಿ.ಅಯ್ಯಪ್ಪ, ಲೆ.ಕರ್ನಲ್ ಪುಟ್ಟಿಚಂಡ ಎಸ್ ಗಣಪತಿ, ಮೇಜರ್ ಬಿದ್ದಂಡ ಎ.ನಂಜಪ್ಪ, ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಮೇಜರ್ ದಿ. ಮಂಗೇರಿರ ಮುತ್ತಣ್ಣ ಪರವಾಗಿ ಪತ್ನಿ ರೀನಾ ಮುತ್ತಣ್ಣ, ಕ್ಯಾಪ್ಟನ್ ಕಾಳಪಂಡ ಬೋಪಯ್ಯ (ಬೆಲ್ಲು), ಕ್ಯಾಪ್ಟನ್ ಹೊಸೋಕ್ಲು ಎಂ.ಚಿಣ್ಣಪ್ಪ, ಸಾಜೆಂಟ್ ಕಿಗ್ಗಾಲು ಎಸ್.ಗಿರೀಶ್, ನಾಯಕ್ ಸುಬೇದಾರ್ ಕೆ.ಜಿ.ಶಿವನ್, ಪ್ಯಾರ ಕಮಾಂಡೋ ಹವಾಲ್ದಾರ್ ಪೊಕ್ಕಳಿಚಂಡ ಮೋಹನ್, ಎಸ್‌ಎಫ್‌ಎನ್ ಎಂ.ಎಸ್.ಚಿಣ್ಣಪ್ಪ, ಹವಾಲ್ದಾರ್ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹವಾಲ್ದಾರ್ ಚಂದ್ರಕುಮಾರ್, ಹವಾಲ್ದಾರ್ ಅಮೆ ಜನಾರ್ದನ್, ಹವಲ್ದಾರ್ ಪಟ್ರಪಂಡ ಸೋಮೇಶ್ ಚಂಗಪ್ಪ, ಕೊಳೇರ ದಿವಂಗತ ನಾಯಕ್ ಸವಿನ್ ಪರವಾಗಿ ಅವರ ತಾಯಿ ಕೋಳೆರ ನಂಜಮ್ಮ, ನಾಯಕ್ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಸಿಪಾಯಿ ಕೆ.ಆರ್.ಸುನಿಲ್, ಸಿಪಾಯಿ ಮಾರ್ಚಂಡ ಗಣೇಶ್, ಕೊಟ್ಟುಕತ್ತಿರ ಜಾಲಿ ಸೋಮಣ್ಣ, ಬೊಟ್ಟಂಗಡ ಜಪ್ಪು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ ಸನ್ಮಾನಿತರ ಪರವಾಗಿ ಮಾತನಾಡಿದರು.