ಜಿಲ್ಲೆ

ಆದೇಶಕ್ಕೆ ಮೊದಲೇ ತಮಿಳುನಾಡಿಗೆ ನೀರು ಬಿಟ್ಟ ರಾಜ್ಯಸರ್ಕಾರ: ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಕ್ರೋಶ

ಮಂಡ್ಯ: ಸುಪ್ರೀಂ ಕೋರ್ಟ್ ಆದೇಶ ನೀಡುವ ಮೊದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಮಂಡ್ಯ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿದೆ ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆರೋಪಿಸಿದರು.

ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಕಾರಣ ನಮ್ಮ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ. ಎಲ್ಲ ಪಕ್ಷಗಳು ರಾಜಕೀಯ ಬದಿಗಿಟ್ಟು ಕಾವೇರಿ ನೀರು ವಿವಾದ ಬಗೆಹರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇತ್ತ ಗೋವಾ ಮಹಾದಾಯಿ ವಿಚಾರದಲ್ಲೂ ಕ್ಯಾತೆ ತೆಗೆದಿದೆ. ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜುಲೈ ತಿಂಗಳಲ್ಲಿ ಬಂದ ಮಳೆ ಆಗಸ್ಟ್‌ನಲ್ಲಿ ಸಂಪೂರ್ಣವಾಗಿ ನಿಂತಿತು. ಮಳೆ ಕೊರತೆಯಿಂದ ರೈತರು ತೀವ್ರವಾಗಿ ಸಂಕಟ ಅನುಭವಿಸುತ್ತಿದ್ದಾರೆ. ರಾಜ್ಯದ ಎಲ್ಲ ಜಲಾಶಯಗಳು ಸಂಪೂರ್ಣ ಭರ್ತಿಯಾಗಿಲ್ಲ, ಹಾಕಿರುವ ಬಿತ್ತನೆ ಬೀಜ, ಹಾಲಿ ಇರುವ ಬೆಳೆಗಳು ಒಣಗುತ್ತಿದ್ದರೂ ತಮಿಳುನಾಡಿಗೆ ನೀರು ಬಿಟ್ಟು ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದು, ಎಲ್ಲ ಪಕ್ಷಗಳು ರಾಜಕೀಯ ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕೆಂದರು.

ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜಕೀಯ ಮಾಡದೆ ಎಲ್ಲ ಪಕ್ಷಗಳು ಕಾವೇರಿ ನದಿ ನೀರಿನ ವಿಚಾರದಲ್ಲಿ ಬದ್ಧತೆ ತೋರಬೇಕು. ಸರ್ವೋಚ್ಚ ನ್ಯಾಯಾಲಯಕ್ಕೆ ಕಾವೇರಿ ಜಲಾನಯನ ಪ್ರದೇಶದ ಸತ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಸರ್ಕಾರ ಮತ್ತು ವಿರೋಧ ಪಕ್ಷದ್ದಾಗಿದೆ. ಈಗಾಗಲೇ 65 ಟಿಎಂಸಿಗೂ ಹೆಚ್ಚು ನೀರು ಹರಿದಿದೆ. ರೈತರು ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿದ ಮೇಲೆ ಜ್ಞಾನೋದಯವಾಗಿದೆ ಎಂದು ಟೀಕಿಸಿದರು.

ನಮ್ಮ ಸರ್ಕಾರ ಮುಂಚಿತವಾಗಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಂಕಷ್ಟದ ಪರಿಸ್ಥಿತಿ ಮನವರಿಕೆ ಮಾಡಿಕೊಡದೆ ಸಂಕಷ್ಟ ಎದುರಿಸುತ್ತಾ ಈಗ ಕ್ರಮಕ್ಕೆ ಮುಂದಾಗಿದೆ. ತ.ನಾಡಿನಲ್ಲಿ ಡಿಎಂಕೆ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ರಾಷ್ಟ್ರೀಯ ಮಟ್ಟದಲ್ಲಿ ‘ಇಂಡಿಯಾ’ ಒಕ್ಕೂಟದಲ್ಲಿವೆ. ಇತ್ತ ಮಹಾದಾಯಿ ವಿಚಾರದಲ್ಲಿ ಕ್ಯಾತೆ ತೆಗೆದಿರುವ ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲಿ ಬಿಜೆಪಿ ಮೈತ್ರಿ ಸರ್ಕಾರವಿದೆ. ಕರ್ನಾಟಕದಲ್ಲಿ ವಿರೋಧ ಪಕ್ಷದವಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಮನಸ್ಸು ಮಾಡಿದರೆ ಸಮಸ್ಯೆಗೆ ಶಾಶ್ವತವಾಗಿ ತೆರೆ ಎಳೆಯುಬಹುದು. ಆದರೆ ಈ ಎರಡು ವಿಚಾರಗಳಲ್ಲಿ ರಾಜಕೀಯ ಮಾಡಬಾರದು, ದೂರದೃಷ್ಟಿಯಿಂದ ಆಲೋಚಿಸಿ ಉತ್ತಮ ನಿರ್ಧಾರ ತೆಗೆದುಕೊಂಡು ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ರಾಜ್ಯ ಸಹಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಬಿ.ಶಿವಕುಮಾರ್ ಮೈಸೂರು, ಆರಾಧ್ಯ ಗುಡಿಗೇನಹಳ್ಳಿ, ಥಾಮಸ್ ಬೆಂಜಮಿನ್, ರಾಮು, ಮಹಾದೇವ ಟೈಲರ್ ಇತರರಿದ್ದರು.