ಜಿಲ್ಲೆ

ಫೆಬ್ರವರಿಯೊಳಗೆ ಕನ್ನಡ ನಾಮಫಲಕ ಅಳವಡಿಸಿ: ಕದಂಬಸೈನ್ಯ ರಾಜಾಧ್ಯಕ್ಷ ಬೇಕ್ರಿ ರಮೇಶ್ ಗಡುವು

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು, ಪೆಟ್ರೋಲ್ ಬಂಕ್, ಮೊಬೈಲ್ ಕಂಪನಿ ಫೆಬ್ರವರಿ 28ರೊಳಗೆ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸಬೇಕು. ಇಲ್ಲದಿದ್ದರೆ ವಿನೂತನ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕದಂಬಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಹೆಚ್ಚು ಕನ್ನಡ ಬಳಸುವ ಜಿಲ್ಲೆ ಮಂಡ್ಯ ಎನ್ನುವ ಹೆಗ್ಗಳಿಕೆ ಇದೆ. ಆದರೆ ಇತ್ತೀಚಿನ ವರ್ಷದಲ್ಲಿ ಇಂಗ್ಲೀಷ್ ನಾಮಫಲಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಹೆಚ್ಚು ವ್ಯಾಪಾರ ಆಗಲಿದೆ ಎನ್ನುವ ಮನೋಭಾವ ಹೊಂದಿದ್ದಾರೆ. ಇದು ಜಿಲ್ಲೆಗೆ ಮಾಡಿದ ಅವಮಾನ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಫೆ.28ರೊಳಗೆ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸಬೇಕೆಂದು ರಾಜ್ಯಸರ್ಕಾರ ಗಡುವು ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಇದನ್ನು ಕಾಯ್ದೆ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಉರ್ದು ಭಾಷೆಯ ನಾಮಫಲಕಗಳನ್ನು ಯಾವುದೇ ಕಾರಣಕ್ಕೂ ತೆಗೆಯುವ ಪ್ರಶ್ನೆಯೇ ಇಲ್ಲವೆಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿರುವುದನ್ನು ಖಂಡಿಸುತ್ತೇವೆ ಎಂದರು.

ರಾಜ್ಯ ಸಂಚಾಲಕ ಎಸ್.ಶಿವಕಮಾರ್, ಸಹಕಾರ್ಯದರ್ಶಿಗಳಾದ ಉಮ್ಮಡಹಳ್ಳಿ ನಾಗೇಶ್, ಬಿ.ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ರಾಮು, ಥಾಮಸ್ ಬೆಂಜಮನ್ ಇದ್ದರು.