ಮಂಡ್ಯ: ರಾಜ್ಯಕ್ಕೆ ಬರುತ್ತಿರುವ ವಲಸಿಗರು ದಿನಕಳೆದಂತೆ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಆದರೂ ರಾಜ್ಯಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ವಿಷಯ ಎಂದು ಕದಂಬ ಸೈನ್ಯದ ಸಂಸ್ಥಾಪಕ ಬೇಕ್ರಿ ರಮೇಶ್ ಹೇಳಿದರು.
ಪ್ರತಿನಿತ್ಯ ಸಾವಿರಾರೂ ಜನರು ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ. ವ್ಯಾಪಾರ, ಸಗಟು ವಹಿವಾಟು, ಕೃಷಿ, ಕಾರ್ಮಿಕ, ಕಟ್ಟಡ ಕಾರ್ಮಿಕ, ಬೀದಿ ವ್ಯಾಪಾರವನ್ನು ಕನ್ನಡಿಗರಿಂದ ಕಸಿದುಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ಕನ್ನಡವನ್ನು ತಿರಸ್ಕರಿಸಿ ಅವರ ಭಾಷೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯಸರ್ಕಾರದ ಕೆಲ ನೌಕರರು ಹಣಕ್ಕಾಗಿ ಆಧಾರ್‌ಕಾರ್ಡ್, ಮತದಾನದ ಗುರುತಿನ ಚೀಟಿ ಕೊಡುವ ಮೂಲಕ ನಾಡದ್ರೋಹಿ ಕೆಲಸ ಮಾಡುತ್ತಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ನಡುವೆ ಕೇಂದ್ರ ಸರ್ಕಾರ ಹಿಂದಿಯನ್ನು ನಮ್ಮ ಮೇಲೆ ಹೇರುವುದು ಖಂಡನೀಯ. ಇಷ್ಟಾದರೂ ರಾಜ್ಯಸರ್ಕಾರ ದನಿ ಎತ್ತಲೇ ಇಲ್ಲ. ಇದಲ್ಲದೆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ರೈಲ್ವೆ, ವಿಮಾನ, ಬ್ಯಾಂಕ್‌ನಲ್ಲಿ ಶೇ.80ರಷ್ಟು ಹಿಂದಿ ಭಾಷಿಕರಿಗೆ ಉದೋಗ ನೀಡಿ ಕನ್ನಡಿಗರನ್ನು ವಂಚಿಸಲಾಗುತ್ತಿದೆ. ಮಾತ್ರವಲ್ಲದೆ 2047ರ ಹೊತ್ತಿಗೆ ದೇಶಾದ್ಯಂತ ಹಿಂದಿ ಭಾಷೆಯನ್ನು ತರುವಂತಹ ಹುನ್ನಾರ ನಡೆಯುತ್ತಿದೆ. ಇದನ್ನು ವಿರೋಧಿಸದಿದ್ದರೆ ಮುಂದೆ ಕನ್ನಡ ಹಾಗೂ ಕನ್ನಡಿಗರಿಗೆ ದೊಡ್ಡ ಅಪಾಯ ಎದುರಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆಯಿಂದ ಜನಾಂದೋಲನ ಮಾಡಲಾಗುವುದು ಎಂದು ವಿವರಿಸಿದರು.
ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಸಂಚಾಲಕ ಸಲ್ಮಾನ್, ರಾಮನಗರ ಜಿಲ್ಲಾ ಕಾರ್ಯದರ್ಶಿ ಚಿಕ್ಕವೆಂಕಟಪ್ಪ, ಆರಾಧ್ಯ ಗುಡಿಗೇನಹಳ್ಳಿ ಇದ್ದರು.