ಜಿಲ್ಲೆ

ಕಡ್ಡಾಯವಾಗಿ ನೋಂದಣಿ ಮಾಡಿಸಲಿ: ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿರುವ ಹೋಟೆಲ್, ರೆಸ್ಟೋರೆಂಟ್, ತಿಂಡಿ ತಿನಿಸು, ಮಾಂಸಾಹಾರ ಸೇರಿದಂತೆ ಎಲ್ಲ ಬಗೆಯ ಆಹಾರ ಸಂಬಂಧಿತ ವ್ಯಾಪಾರ ಮಾಡುವವರು ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಮಾತ್ರವಲ್ಲದೆ ಕಡ್ಡಾಯವಾಗಿ ಆಹಾರ ಸ್ವಚ್ಛತಾ ಹಾಗೂ ಪರಿಸರ ನೈರ್ಮಲ್ಯ ಸಂಬಂಧಿತ ನಿಯಮಗಳನ್ನು ಪಾಲಿಸಬೇಕು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.

ಜಿಲ್ಲೆಯ ಹಲವು ಆಹಾರ ಮಳಿಗೆಗಳು ನಿಯಮ ಪಾಲನೆ ಮಾಡುತ್ತಿಲ್ಲ. ಮಾತ್ರವಲ್ಲದೆ ಗುಣಮಟ್ಟವಿಲ್ಲದ, ಅಸುರಕ್ಷಿತ ಆಹಾರ ತಯಾರಿಸಿ ವಿತರಣೆ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಆಹಾರ ತಯಾರಿಕೆಗೆ ಸ್ವಚ್ಛತೆಯ ನಿಯಮಗಳನ್ನು ಪಾಲನೆ ಮಾಡದೇ ಇದ್ದು, ಪಡೆಯುವ ಹಣಕ್ಕೆ ಸರಿಯಾದ ಪ್ರಮಾಣದ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ. ಅಲ್ಲದೇ ರಾಸಾಯನಿಕ ಅಂಶಗಳನ್ನು ಆಹಾರದಲ್ಲಿ ಸೇರಿಸಿ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ತಂದೊಡ್ಡುತ್ತಿದ್ದಾರೆ. ಅದು ಮಾತ್ರವಲ್ಲದೇ ಸ್ವಚ್ಛತೆಯಿರದ ಕಡೆಗಳಲ್ಲಿ ಆಹಾರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆಹಾರ ಇಲಾಖೆಗೆ ಸಂಬಂಧಿತ ಅಧಿಕಾರಿಗಳು, ನಗರಸಭೆಯ ಆರೋಗ್ಯ ಪರಿವೀಕ್ಷಕರು ಉದಾಸೀನತೆ ತೋರುತ್ತಿರುವುದರಿಂದಾಗಿ ಪರವಾನಗಿ ಪಡೆಯದೇ ಇಂದು ಎಲ್ಲೆಂದರಲ್ಲಿ ಆಹಾರ ತಯಾರಿಸುವ ಹೋಟೆಲ್ ಆರಂಭಗೊಳ್ಳುತ್ತಿದ್ದು, ಸಾರ್ವಜನಿಕರನ್ನು ಅನಾರೋಗ್ಯದ ಕೂಪಕ್ಕೆ ತಳ್ಳುತ್ತಿದ್ದಾರೆ. ಅಧಿಕಾರಿಗಳು ತಮಗೆ ಬೇಕಾದದ್ದನ್ನು ಪಡೆದು ಏನು ಕಾಣದಂತೆ ಸುಮ್ಮನಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಆಹಾರ ಪದಾರ್ಥಗಳನ್ನು ನೀಡುವ ವ್ಯಾಪಾರ ಮಾಡುವವರು ಆಹಾರ ಪರವಾನಿಗಿ ಪಡೆದು, ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಆಹಾರ ಪದಾರ್ಥಗಳ ಬೆಲೆ ಮತ್ತು ತೂಕವನ್ನು ಫಲಕಗಳ ಮೂಲಕ ಪ್ರಕಟಿಸಬೇಕು. ಇಲ್ಲವಾದಲ್ಲಿ ಆಹಾರ ಸುರಕ್ಷತಾ ಕಾಯ್ದೆ 21 ಮತ್ತು 63ರಂತೆ ದಂಡ ಅಥವಾ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೈನ್ಯದ ಜಿಲ್ಲಾಧ್ಯಕ್ಷ ಜೋಸೆಫ್ ರಾಮು, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಸಂಚಾಲಕ ಸಲ್ಮಾನ್, ಕರವೇ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಅಶೋಕ್ ಇದ್ದರು.