ಜಿಲ್ಲೆ

ಇಮ್ಮಡಿ ಪುಲಿಕೇಶಿ ವಿಜಯೋತ್ಸವ ಆಚರಣೆಗೆ ಕದಂಬ ಕನ್ನಡ ಸೇನಾಯಿಂದ ಸರ್ಕಾರಕ್ಕೆ ಒತ್ತಾಯ

ಮೈಸೂರು: ಕನ್ನಡದ ಹೆಮ್ಮೆಯ ಚಾಲುಕ್ಯ ಅರಸ ಇಮ್ಮಡಿ ಪುಲಿಕೇಶಿ, ಉತ್ತರದ ಹರ್ಷವರ್ಧನನನ್ನು ಏ.4ರಂದು ಸೋಲಿಸಿ ಕನ್ನಡದ ವಿಜಯಪತಾಕೆ ಹಾರಿಸಿದ್ದ. ಹಾಗಾಗಿ ಸರ್ಕಾರ ಅಂದೇ ಇಮ್ಮಡಿ ಪುಲಿಕೇಶಿ ವಿಜಯೋತ್ಸವವನ್ನು ಮುಂದಿನ ವರ್ಷದಿಂದ ಆಚರಿಸಬೇಕು ಎಂದು ಕದಂಬ ಕನ್ನಡ ಸೇನಾ ಅಧ್ಯಕ್ಷ ಶಿವಕುಮಾರ್ ಒತ್ತಾಯಿಸಿದರು.

ಚಾಲುಕ್ಯ ರಾಜ ಇಮ್ಮಡಿ ಪುಲಿಕೇಶಿ ಮತ್ತು ಕದಂಬ ಮಯೂರ ವರ್ಮರ ಪುತ್ಥಳಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಠಾಪಿಸಬೇಕು. ಸರ್ಕಾರದ ಲಾಂಛನದಲ್ಲಿ ಹಿಂದಿ ಭಾಷೆಯಲ್ಲಿರುವ ಸತ್ಯ ಮೇವ ಜಯತೆ ಎಂಬುದನ್ನು ಕನ್ನಡ ಭಾಷೆಯ ಅಕ್ಷರಗಳಲ್ಲಿ ಬರೆಯಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದ ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಅನ್ಯ ರಾಜ್ಯದ ರಾಜರುಗಳ ಪಾಠಗಳನ್ನು ಕೈಬಿಡಬೇಕು. ಕನ್ನಡ ರಾಜ್ಯವನ್ನು ಉತ್ತರದವರೆವಿಗೂ ವಿಸ್ತರಿಸಿದ್ದ ಗಂಗರಸರ ನೆನಪಿನಲ್ಲಿ ತಲಕಾಡಿನಲ್ಲಿ ತಲಕಾಡು ಗಂಗೋತ್ಸವ ಆಚರಿಸಬೇಕು ಎಂದು ಒತ್ತಾಯಿಸಿದರು.

ಕದಂಬ ಕನ್ನಡ ಸೇನೆ ಕರ್ನಾಟಕದ ಸಂಸ್ಥಾಪಕ ಕದಂಬ ನಾ.ಅಂಬರೀಷ, ಜಿಲ್ಲಾಧ್ಯಕ್ಷ ಬಸವಣ್ಣ ಕದಂಬ, ಮೈಸೂರು ನಗರ ಅಧ್ಯಕ್ಷ ವೆಂಕಟೇಶ್ ಇತರರು ಇದ್ದರು.