ಜಿಲ್ಲೆ

ಅಕ್ಕಮಹಾದೇವಿ ಜನ್ಮಸ್ಥಳ ಉಡತಡಿ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ : ಮಾಜಿ ಸಚಿವೆ ಲೀಲಾದೇವಿ

ಸದೇಶ್ ಕಾರ್ಮಾಡ್

ಮೈಸೂರು: ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಶಿವಮೊಗ್ಗದ ಉಡತಡಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುತ್ತಿದ್ದೇನೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಹಾಗೂ ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ ವತಿಯಿಂದ ಭಾನುವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಕದಳಿ ಶ್ರೀ ಪ್ರಶಸ್ತಿ ಪ್ರದಾನ ಮತ್ತು ಕದಳಿ ಮಹಿಳಾ ವೇದಿಕೆ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಕ್ಕಮಹಾದೇವಿ ಜನ್ಮಸ್ಥಳ ಗೋಮಾಳದಲ್ಲಿ ಇತ್ತು. ನಾನು ವಿಧಾನಸೌಧ ಅಲೆದು ಅಕ್ಕಮಹಾದೇವಿ ಜನ್ಮಸ್ಥಳಕ್ಕೆ 5 ಎಕರೆ ಜಾಗ ಕೊಡಿ ಸಿದೆ. ಆ ಜಾಗದಲ್ಲಿ ಅಕ್ಕಮಹಾದೇವಿ ದೇವಸ್ಥಾನವನ್ನು ಅಭಿವೃದ್ಧಿ ಮಾಡಿದ್ದೇನೆ. ಈ ಜಾಗವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ದೆಹಲಿಯಲ್ಲಿ ಕುಳಿತು ಇದಕೋಸ್ಕರ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ನನ್ನ ಆರಾಧ್ಯದೈವ ಅಕ್ಕಮಹಾದೇವಿ. ಸಂಘ-ಸಂಸ್ಥೆೆಗಳ ಮೂಲಕ ಅಕ್ಕ ಮಹಾದೇವಿ ಸೇರಿದಂತೆ ಶರಣರ ಸ್ಮರಣೆ ಮಾಡಿದರೆ ಸಾಲದು. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಉಡತಡಿ ಅತ್ಯಂತ ಪವಿತ್ರ ಸ್ಥಳ. ಉಡತಡಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದೇನೆ. ಗೆಸ್ಟ್ ಹೌಸ್, ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲಾಗಿದೆ ಎಂದರು.

‘ವೈರಾಗ್ಯ ನಿಧಿ-ಜಗದ ಸೋಜಿಗ ಕೃತಿ’ಯನ್ನು ಬಿಡುಗಡೆ ಮಾಡಿದ ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ, ಬದುಕಿನಲ್ಲಿ ಭ್ರಷ್ಟಾಚಾರ, ಕಪಟ, ಗರ್ವ, ಲಂಪಟತನ ಮುಂತಾದ ಅನೈತಿಕ ಅಂಶಗಳಿಗೆ ಜಾಗ ನೀಡದೆ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಕರೆ ನೀಡಿದರು.

ಅಕ್ಕಮಹಾದೇವಿ ಕುರಿತು ಇದುವರೆಗೆ ರಚನೆಯಾಗಿರುವ ಕೃತಿಗಳಲ್ಲಿ ಇಲ್ಲದೆ ಇರುವ ಅಂಶ ‘ವೈರಾಗ್ಯ ನಿಧಿ-ಜಗದ ಸೋಜಿಗ ಕೃತಿ’ಯಲ್ಲಿ ಇದೆ. ನಮಗೆ ಅಕ್ಕಮಹಾದೇವಿ ಎಂಬ ಶಬ್ದ ಕೇಳಿದೊಡನೆ ನಮಗೆ ‘ಕದಳಿ’ ನೆನಪಾಗುತ್ತದೆ. ಕದಳಿ ಹಾಗೂ ಅಕ್ಕನ ಸಂಬಂಧ ಅವಿನಾಭಾವದಿಂದ ಕೂಡಿದೆ. ಈ ಕಾರಣಕ್ಕೆ ಕದಳಿ ಮಹಿಳಾ ವೇದಿಕೆ ಪ್ರಾರಂಭಿಸಲಾಯಿತು ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ತಂದೆ-ತಾಯಂದಿರು ತಮ್ಮ-ತಮ್ಮ ಮಕ್ಕಳಿಗೆ ವಚನ ಸಾಹಿತ್ಯವನ್ನು ಹೇಳಿಕೊಡಬೇಕು. ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲೇ ಹಲವಾರು ಅಧರ್ಮಿಯ, ಅನೈತಿಕತೆಯ ಕೃತ್ಯಗಳು ನಡೆಯುತ್ತಿವೆ. ತಾಯಿಯನ್ನು ಮಗನೇ ಕೊಲೆ ಮಾಡುವುದು.. ಮುಂತಾದವುಗಳನ್ನು ನಾವು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ. ಇದನ್ನು ಗಮನಿಸಿದರೇ ಪ್ರಪಂಚ ಯಾವ ಕಡೆ ಸಾಗುತ್ತಿದೆ ಎಂಬ ಆತಂಕ ಉಂಟಾಗುತ್ತದೆ. ಹಾಗಾಗಿ ಪಾಲಕರು ಪೋಷಕರು ಮಕ್ಕಳಿಗೆ ವಚನ ಸಾಹಿತ್ಯವನ್ನು ಹೇಳಿಕೊಡುವ ಮೂಲಕ ಅವರಿಗೆ ಜೀವನ ಮೌಲ್ಯ ಕಲಿಯಿಸಬೇಕು ಎಂದರು.

ಶರಣರ ಆದರ್ಶ, ವಚನಗಳಲ್ಲಿರುವ ಮೌಲ್ಯಗಳನ್ನು ವಯಸ್ಸಾದವರು, ಹಿರಿಯ ನಾಗರಿಕರು ಕಲಿತು ತಮ್ಮಲ್ಲೇ ಅದನ್ನು ಇಟ್ಟುಕೊಂಡರೇ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ತಾವು ಕಲಿತಿರುವ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಇದರಿಂದ ಮಕ್ಕಳು ಜೀವನದಲ್ಲಿ ಸಂಸ್ಕಾರವನ್ನು, ಧರ್ಮ ಮಾರ್ಗವನ್ನು ಅನುಸರಿಸುತ್ತಾರೆ. ಭವಿಷ್ಯವೂ ಚೆನ್ನಾಗಿರುತ್ತದೆ ಎಂದರು.

ವಚನ ಸಾಹಿತ್ಯ ಎನ್ನುವುದು ನಮ್ಮ ಜೀವನದ ಸಂವಿಧಾನ. ಶರಣರು ರಚಿಸಿರುವ ವಚನಗಳಲ್ಲಿ ಜೀವನವನ್ನು ಮೌಲ್ಯಯುತವಾಗಿ ನಡೆಸಲು ಬೇಕಾದಂತಹ ಮಾರ್ಗದರ್ಶನವಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ... ಎನ್ನುವ ವಚನವೊಂದೇ ಸಾಕು ಮಾನವ ಹೇಗೆ ಬದುಕಬೇಕು ಎಂದು ತಿಳಿಸಿಕೊಡಲು. ಈ ಹಿನ್ನೆೆಲೆಯಲ್ಲಿ ವಚನ ಸಾಹಿತ್ಯ ತಿದ್ದುಪಡಿ ಮಾಡಲಾಗದ ಸಂವಿಧಾನವಾಗಿದೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಅಕ್ಕ ಮಹಾದೇವಿ, ಆಯ್ದಕ್ಕಿ ಲಕ್ಕವ್ವ ಮುಂತಾದವರು ಜೀವನದ ಸಾರವನ್ನು ಕುರಿತು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಆಸೆ, ಅಹಂಕಾರ, ಗರ್ವ, ಭಯ ಇವುಗಳ ಬಗ್ಗೆೆ ವಚನಗಳ ಮೂಲಕ ತಿಳಿ ಹೇಳಿದ್ದಾರೆ. ತನ್ಮೂಲಕ ಪುರುಷರಿಗೆ ಮಾರ್ಗದರ್ಶನ ಕೂಡ ಮಾಡಿದ್ದಾರೆ ಎಂದರು.

ಈ ಸಂದರ್ಭ ಪದ್ಮಶ್ರೀ ಪುರಸ್ಕೃತರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಕದಳಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಮೊಗ್ಗದ ಆನಂದಪುರದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಳವರಹುಂಡಿ ಸಿದ್ದಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಕಾರ್ಯದರ್ಶಿ ವಾಗ್ದೇವಿ ಇದ್ದರು.