ಜಿಲ್ಲೆ

ಕಡಲೆಕಾಯಿ ಪರಿಷೆ 5 ದಿನಗಳಿಗೆ ವಿಸ್ತರಣೆ

ಪಂಕಜ ಕೆ.ಎಂ.

ಬೆಂಗಳೂರು: ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಇನ್ನೊಂದು ತಿಂಗಳು ಬಾಕಿ ಉಳಿದಿದ್ದು, ಈ ಬಾರಿ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ.

ಕಡಲೆಕಾಯಿ ಪರಿಷೆ 2025ರ ಕುರಿತು ಗುರುವಾರ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದ ಕೊನೆಯ ಸೋಮವಾರ (ನ.17) ದಂದು ಬಸವನಗುಡಿಯ ಶ್ರೀ ಬಸವಣ್ಣ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗುವುದು. ಪ್ರತಿ ವರ್ಷ ಎರಡು ದಿನಗಳ ಕಾಲ ಪರಿಷೆ ನಡೆಸಲಾಗುತ್ತಿತ್ತು. ಆದರೆ, ಈ ವರ್ಷ ಐದು ದಿನ (ನ.15 ರಿಂದ 19ರವರೆಗೆ) ಆಚರಿಸಲು ನಿರ್ಧರಿಸಲಾಗಿದೆ. ಪರಿಷಯ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸುವುದಾಗಿ ಸಚಿವರು ಸಭೆಯಲ್ಲಿ ತಿಳಿಸಿದರು.

21 ಬಸವಣ್ಣಗಳಿಗೆ ಪೂಜೆ :

ಈ ಬಾರಿ ಕಡಲೆಕಾಯಿ ಪರಿಷೆ ಉದ್ಘಾಟನೆಯನ್ನು 21 ಬಸವಣ್ಣಗಳನ್ನು ದೇವಾಲಯಕ್ಕೆ ಕರೆತಂದು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲಾಗುತ್ತದೆ. ಜತೆಗೆ ವಿಜೃಂಭಣೆಯಿಂದ ಉತ್ಸವ ಆಚರಿಸಲು ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಎನ್.ಆರ್. ರಸ್ತೆಗಳಿಗೂ 5 ದಿನಗಳ ಕಾಲ ದೀಪಾಲಂಕಾರ ವಿಸ್ತರಿಸಲಾಗುತ್ತದೆ.

ಭದ್ರತಾ ವ್ಯವಸ್ಥೆ:

ಪರಿಷೆಗೆ 5 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುವ ನಿರೀಕ್ಷೆ ಹೊಂದಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲು ಅಗತ್ಯ ಭದ್ರತಾ ಸಿಬ್ಬಂದಿ, ಮಾರ್ಷಲ್‌ಗಳ ನಿಯೋಜನೆ, ಸಿಸಿ ಕ್ಯಾಮರ ಅಳವಕಡಿಕೆ ಇತ್ಯಾದಿ ಭದ್ರತೆಗಾಗಿ ಪೊಲೀಸ್ ಇಲಾಖೆ ಸಹಕಾರ ಪಡೆಯುವುದು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಯಿತು.

ಸಭೆಯಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಎಂ. ನಾಗರಾಜ್, ದ್ವಾರಕಾನಾಥ್, ಜಿಬಿಎ ಹೆಚ್ಚುವರಿ ಆಯುಕ್ತ ದಿಗ್ವಿಜಯ ಬೋಡ್ಸೆ, ದೊಡ್ಡ ಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಪಾರ್ವತಿ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್

ಪ್ಲಾಸ್ಟಿಕ್ ಮುಕ್ತ ಪರಿಷೆ:

ಈ ಬಾರಿಯೂ ಪ್ಲಾಸ್ಟಿಕ್ ಮುಕ್ತ ಪರಿಷೆಯ ಸಂಕಲ್ಪ ಮಾಡಲಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸಂಬಂಧಿಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ವ್ಯಾಪಾರಿಗಳಿಗೆ ಪೇಪರ್ ಬ್ಯಾಗ್ ಬಳಕೆ ಮಾಡುವಂತೆ ಹಾಗೂ ಗ್ರಾಹಕರಿಗೆ ಮನೆಯಿಂದಲೇ ಬಟ್ಟೆ ಬ್ಯಾಗ್‌ಗಳನ್ನು ತರುವಂತೆ ಅರಿವು ಮೂಡಿಸಲು ಎನ್‌ಜಿಒ ಸಹಕಾರದೊಂದಿಗೆ ‘ಬನ್ನಿ ಕೈ ಚೀಲ ತನ್ನಿ’ ಎಂಬ ೋಷಣೆ ಮಾಡುವುದು, ಎನ್‌ಜಿಒಗಳ ಮೂಲಕ ಪೇಪರ್ ಬ್ಯಾಗ್‌ಗಳ ವಿತರಣೆಗೆ ಕ್ರಮ ವಹಿಸುವಂತೆ ಸೂಚನೆ ನೀಡಲಾಯಿತು.

ಸುಂಕ ವಸೂಲಾತಿ ರದ್ದು:

ಕಳೆದ ವರ್ಷದಂತೆ ಈ ಬಾರಿಯೂ ಪರಿಷೆಯಲ್ಲಿ ಸುಂಕ ವಸೂಲಾತಿ ರದ್ದು ಪಡಿಸಲಾಗಿದೆ. ಈ ಹಿಂದೆ ಬುಲ್ ಟೆಂಪಲ್ ರಸ್ತೆಯಲ್ಲಿ ಪರಿಷೆ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಟೆಂಡರ್ ಕರೆಯಲಾಗುತ್ತಿತ್ತು. ಆದರೆ, ಟೆಂಡರ್ ಪಡೆದವರು ಅಂಗಡಿಯವರಿಂದ ನಿಗದಿತ ಮೊತ್ತಕ್ಕಿಂತ ಅಧಿಕ ಸುಂಕವನ್ನು ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಸುಂಕ ವಸೂಲಾತಿ ಕೈಬಿಡಲಾಗಿತ್ತು. ಈ ವರ್ಷವೂ ಅದೇ ತೀರ್ಮಾನ ಕೈಗೊಳ್ಳಲಾಗಿದೆ.