ಜಿಲ್ಲೆ

ಕಡಗದಾಳು ಪ್ರೌಢಶಾಲಾ ಶಿಕ್ಷಕರಿಗೆ ದಸಂಸ ಸನ್ಮಾನ

reportermys

ಮಡಿಕೇರಿ: ಹತ್ತನೇ ತರಗತಿಯಲ್ಲಿ ಸತತವಾಗಿ ಶೇ.೧೦೦ ಫಲಿತಾಂಶ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕಡಗದಾಳು ಪ್ರೌಢಶಾಲಾ ಶಿಕ್ಷಕರನ್ನು ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೩೦ ವರ್ಷ ದಿಂದ ಸಂಘಟನೆಯಿಂದ ಸನ್ಮಾನಿಸಲಾಗುತ್ತಿದೆ. ಶೇ.೧೦೦ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರಿಗೆ ೧೦ ವರ್ಷದಿಂದ ಸನ್ಮಾನಿಸಲಾಗುತ್ತಿದೆ ಎಂದರು.

ಹತ್ತು ವರ್ಷದಿಂದ ಮಡಿಕೇರಿ ನಗರಸಭೆಗೆ ಒಳಪಟ್ಟ ೩ ಪ್ರಾಥಮಿಕ ಶಾಲೆಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಕೆಲವು ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ತರಬೇತಿ ಶಿಬಿರ ಆಯೋಜಿಸಲಾಗಿದೆ. ಆ ಮೂಲಕ ಶಿಕ್ಷಣ ಕ್ಷೇತ್ರದತ್ತ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದು ದಿವಾಕರ್ ಹೇಳಿದರು.

ದಲಿತ ಸಂಘರ್ಷ ಸಮಿತಿ ಬಹಳಷ್ಟು ವರ್ಷಗಳಿಂದ ಒಳ್ಳೆಯ ಕಾರ್ಯ ಮಾಡುತ್ತಿದೆ. ಶಿಕ್ಷಕರಿಗೆ ಸನ್ಮಾನಿಸುವುದು ಅನುಕರಣೀಯ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವಾಸು ಮೆಚ್ಚುಗೆ ವ್ಯಕ್ತ ಪಡಿಸಿದರು. ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣ ಉತ್ತಮವಾಗಿರುತ್ತದೆ. ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆಂದರು.

ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಸಲುವಾಗಿ ವಿದ್ಯಾರ್ಥಿಗಳಿಗೆ ಜ್ಞಾನ ಧಾರೆ ಎರೆಯುತ್ತಿರುವ ಶಿಕ್ಷಕರನ್ನು ಸನ್ಮಾನಿಸುವುದು ಶ್ಲಾಘನೀಯ ಎಂದರು.

ಬೊಟ್ಲಪ್ಪ ಯುವಕ ಸಂಘ ಸ್ಥಾಪಕಾಧ್ಯಕ್ಷ ಜೋಯಪ್ಪ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಂಪತ್ತು ಗಳಿಸಬಹುದು. ಆದರೆ, ವಿದ್ಯೆ, ಗೌರವ ಪಡೆದುಕೊಳ್ಳುವುದು ಬಹಳ ಕಷ್ಟ. ವಿದ್ಯೆಯನ್ನು ಕಸಿದುಕೊಳ್ಳುವುದು ಕಷ್ಟ ಎಂದರು. ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಟಿ. ಜಯಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಸಿರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೇಲುಸ್ವಾಮಿ, ಮುಖ್ಯಶಿಕ್ಷಕಿ ಗಂಗಮ್ಮ ಮತ್ತಿತರರು ಇದ್ದರು.