ಜಿಲ್ಲೆ

ಕಡಬ ಪಟ್ಟಣ ಪಂಚಾಯಿತಿ ಚುನಾವಣೆ : ನಿರಂತರ ಮಳೆ ನಡುವೆಯೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಡಬ

ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿ ಭಾನುವಾರ ಚುನಾವಣೆ ನಡೆಯಿತು.

ಆರಂಭದಲ್ಲಿ ನಿಧಾನಗತಿಯಿಂದ ಮತದಾನ ನಡೆದರೂ ಮಧ್ಯಾಹ್ನದ ವೇಳೆಗೆ ಮತ ಚಲಾವಣೆ ಬಿರುಸು ಪಡೆಯಿತು. ನಿರಂತರ ಮಳೆಯಾಗುತ್ತಿದ್ದರೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. 13 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಸ್ಪರ್ಧೆ ನಡೆದಿದೆ. ಉಳಿದಂತೆ 3 ಕ್ಷೇತ್ರಗಳಲ್ಲಿ ಬಹುಕೋನ ಸ್ಪರ್ಧೆ ನಡೆದಿದೆ. ಇಲ್ಲಿ ಎಸ್‌ಡಿಪಿಐ 3 ಕ್ಷೇತ್ರಗಳಲ್ಲಿ, ಮುಸ್ಲಿಂ ಲೀಗ್ 1 ಕ್ಷೇತ್ರದಲ್ಲಿ ಹಾಗೂ 2 ಕ್ಷೇತ್ರಗಳಲ್ಲಿ ಪಕ್ಷೇತರರು ಸ್ಪರ್ಧೆಗಿಳಿದಿದ್ದಾರೆ. ಒಟ್ಟು 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಡಬ ಪೊಲೀಸರಿಂದ ಬಿಗು ಬಂದೋಬಸ್ತು ನಡೆಯಿತು. ತಾಲೂಕು ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಂ ವ್ಯವಸ್ಥೆ ಮಾಡಲಾಗಿದೆ. ಆ.20ರಂದು ಮತದಾನ ಎಣಿಕೆ ನಡೆಯಲಿದೆ.

ಎಲ್ಲ ಮತಗಟ್ಟೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಯಾವುದೇ ದಟ್ಟಣೆಯಿಲ್ಲದೆ ಮತದಾನ ನಡೆಯಿತು. ಎಲ್ಲ ಜೀಪು ಸೇರಿದಂತೆ ಇನ್ನಿತರ ವಾಹನಗಳಲ್ಲಿ ಪಕ್ಷದ ಪ್ರಮುಖರು ಮತದಾರರನ್ನು ಮತಗಟ್ಟೆ ತನಕ ಕರೆತರುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ವಾಹನಗಳನ್ನು ಸೀಝ್ ಮಾಡುವ ಎಚ್ಚರಿಕೆ ನೀಡಿದರು. ಮತದಾರಲ್ಲದವರವರು ಮತಗಟ್ಟೆ ಪ್ರದೇಶ ಬಿಟ್ಟು ತೆರಳಿ ಎಂದು ಕಡಬ ಎಸ್‌ಐ ಅಭಿನಂದನ್ ಕೊಂಡಿಂಬಾಳ ಗ್ರಾಮದ ಓಂತ್ರಡ್ಕ ಮತಗಟ್ಟೆಯಲ್ಲಿ ಎಚ್ಚರಿಕೆ ನೀಡಿದರು.

ಹೆರಿಗಾಗಿ ಸೋಮವಾರ ಆಸ್ಪತ್ರೆಗೆ ದಾಖಲಾಗಲಿರುವ ತುಂಬು ಗರ್ಭಿಣಿ ಗೀತಾ ಅವರು ಕೋಡಿಂಬಾಳ ವಾರ್ಡಿನ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಹಲವು ವಾರ್ಡ್‌ಗಳಲ್ಲಿ ಅನಾರೋಗ್ಯ ಪೀಡಿತರು, ವೃದ್ಧರು ಮತದಾನದ ಹಕ್ಕು ಚಲಾಯಿಸಿದರು.