ಜಿಲ್ಲೆ

ಸಾರ್ವಜನಿಕರಲ್ಲಿ ಮೂಡಲಿ ಅರಿವು : ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಸಲಹೆ

ಸೌಮ್ಯ ಆರ್

ಕಡಬ: ಪಟ್ಟಣ ಪಂಚಾಯಿತಿ, ದ.ಕ.ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಕಡಬ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಗಾಂಧೀಜಿ ಹಾಗೂ ಲಾಲ್‌ಬಹಾದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮತ್ತು ಕಡಬ ಪಟ್ಟಣ ಸ್ವಚ್ಛತಾ ಕಾರ್ಯಕ್ರಮ ಬುಧವಾರ ನಡೆಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ.ಕಡಬ ಶ್ರೀಗಣೇಶ್ ಬಿಲ್ಡಿಂಗ್ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು.

ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಮಾತನಾಡಿ, ನಮಗೆ ಮುಖ್ಯವಾಗಿ ಸ್ವಚ್ಛತೆ, ಶಿಕ್ಷಣ ಹಾಗೂ ಕೌಶಲಭರಿತ ಆರೋಗ್ಯ ಪೂರ್ಣ ಜೀವನ ಪದ್ಧತಿ ಬೇಕು, ಸ್ವಚ್ಛತೆಗೆ ಪ್ರಾತಿನಿಧ್ಯ ನೀಡಬೇಕು. ಕಳೆದ ನಾಲ್ಕು ವರ್ಷಗಳಿಂದ ಕಡಬ ಗ್ಯಾರೇಜ್ ಮಾಲೀಕರ ಸಂಘದವರು ಸ್ವಚ್ಛತಾ ಕಾರ್ಯ ಮಾಡುತ್ತಿದ್ದು ಶ್ಲಾಘನೀಯ. ಸ್ವಚ್ಛ ಮಾಡಿದ ಪ್ರದೇಶದಲ್ಲಿ ಸಾರ್ವಜನಿಕರು ಮತ್ತೆ ತ್ಯಾಜ್ಯ ಕಸ ಹಾಕದಂತೆ ಅವರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.

ದ.ಕ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಕಡಬ ತಾಲೂಕು ಘಟಕದ ಗೌರವಾಧ್ಯಕ್ಷ ಸುಂದರ ಗೌಡ ಮಂಡೆಕರ ಮಾತನಾಡಿದರು. ಕಡಬ ಪಪಂ ಇಂಜಿನಿಯರ್ ಶಿವಕುಮಾರ್, ಸಿಬ್ಬಂದಿ ವಾರಿಜಾ, ಗೀತಾ, ಶಶಿಕಲಾ, ಗ್ಯಾರೇಜ್ ಮಾಲೀಕ ಸಂಘದ ಕಡಬ ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್, ಉಪಾಧ್ಯಕ್ಷ ನಿತ್ಯಾನಂದ ಗೌಡ, ಪ್ರಧಾನ ಕಾರ್ಯದರ್ಶಿ ರಾಜ್‌ಪ್ರಕಾಶ್, ಜತೆ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕೋಶಾಧಿಕಾರಿ ದೇವಣ್ಣ ಗೌಡ ಸಂಪಡ್ಕ, ಜೂನಿಯರ್ ಟೆಲಿಕಾಂ ಅಧಿಕಾರಿ ಹೇಮಂತ್ ಮಂಡೆಕರ, ಉದ್ಯಮಿ ಹಿತೇಶ್ ಮಂಡೆಕರ ಮತ್ತಿತರರು ಉಪಸ್ಥಿತರಿದ್ದರು.

ಪ.ಪಂ.ಸಿಬ್ಬಂದಿ ಹರೀಶ್ ಬೆದ್ರಾಜೆ ಸ್ವಾಗತಿಸಿ, ವಂದಿಸಿದರು. ಪ.ಪಂ.ಸ್ವಚ್ಛತಾ ಸಿಬ್ಬಂದಿಗೆ ಕಡಬ ದೇವಸ್ಯ ಹೈಡ್ರೋಮೇಟಿಕ್ಸ್ ಇಂಜಿನಿಯರಿಂಗ್ ಸಂಸ್ಥೆಯ ಮಾಲೀಕ ಚೇತನ್ ದೇವಸ್ಯ ಕೊಡಮಾಡಿದ ಕಸಹೆಕ್ಕುವ ಸಾಧನವನ್ನು ವಿತರಿಸಲಾಯಿತು. ಬಳಿಕ ಕಡಬ ತಾಲೂಕು ಕಚೇರಿ ಬಳಿಯಿಂದ ಪ್ರಾರಂಭಿಸಿ ಪೇಟೆಯಾದ್ಯಂತ ಸ್ವಚ್ಛತೆ ಮಾಡಲಾಯಿತು.