ಜಿಲ್ಲೆ

ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ ಕಡಬ ತಾಲೂಕು

Dakshina Kannada

ಪ್ರವೀಣ್‌ರಾಜ್ ಕೊಲ ಕಡಬ

ಅನುದಾನ ಕೊರತೆಯಿಂದ ಕಡಬ ತಾಲೂಕು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಲ್ಲಿ ಘೋಷಣೆಯಾದ ತಾಲೂಕು ಪಟ್ಟಿಯಲ್ಲಿ ಕಡಬವೂ ಸೇರಿತ್ತು. ಬಳಿಕದ ಸರ್ಕಾರಗಳು ಅನುಷ್ಠಾನಕ್ಕೆ ಮುಂದಡಿಯಿಟ್ಟಿಲ್ಲ. ಪ್ರಸ್ತುತ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡುವ ನಿರೀಕ್ಷೆಯನ್ನುಟ್ಟುಕೊಂಡಿದ್ದಾರೆ ತಾಲೂಕಿನ ಜನತೆ.

ಆರು ದಶಕಗಳ ಹೋರಾಟದ ಫಲವಾಗಿ ಘೋಷಣೆಯಾದ ಕಡಬ ತಾಲೂಕು, ಉದ್ಘಾಟನೆಗೆ ತೋರಿದ ಉತ್ಸಾಹ ಅನುಷ್ಠಾನಕ್ಕೆ ತೋರದೆ ಇರುವುದೇ ತಾಲೂಕು ಎನ್ನುವುದು ಹೆಸರಿಗೆ ಮಾತ್ರ ಸೀಮಿತವಾಗಿದೆ. ರಾಜ್ಯ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ತಾಲೂಕು ಅನುಷ್ಠಾನಕ್ಕೆ ಅನುದಾನ ಕಾದಿರಿಸುವ ನಿರೀಕ್ಷೆಯಲ್ಲಿ ಕಡಬ ಜನತೆಯದು.

ಈ ಹಿಂದೆ ತನ್ನ ಅಧಿಕಾರಾವಧಿಯ ಕೊನೆಯಲ್ಲಿ ಕಡಬವನ್ನು ತಾಲೂಕು ಘೋಷಣೆ ಮಾಡಿದ ಬಿಜೆಪಿ ಸರ್ಕಾರ ಈಗ ಮತ್ತೆ ಅಧಿಕಾರದಲ್ಲಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ತಾಲೂಕು ಅನುಷ್ಠಾನವಾಗಲಿಲ್ಲ. ಬದಲಿಗೆ ಅವರು ಕೂಡ ತಮ್ಮ ಅಧಿಕಾರದ ಕೊನೆಯ ಗಳಿಗೆಯಲ್ಲಿ ತಾಲೂಕು ಘೋಷಣೆ ಮಾಡಿದರು. ಬಳಿಕ ಬಂದ ಸಮ್ಮಿಶ್ರ ಸರ್ಕಾರ ಉದ್ಘಾಟನೆ ನೆರವೇರಿಸುವಲ್ಲಿ ಯಶಸ್ವಿಯಾಯಿತು. ನಮ್ಮ ಅಧಿಕಾರಾವಧಿಯಲ್ಲಿ ಕಡಬ ತಾಲೂಕು ಘೋಷಣೆ ಮಾಡಿದ್ದೆವು, ಮತ್ತೆ ನಮಗೆ ಜನ ಆಶೀರ್ವಾದ ಮಾಡಲಿಲ್ಲ. ನಮ್ಮ ಸರ್ಕಾರ ಅಸ್ತಿತ್ವದಲ್ಲಿದ್ದರೆ ತಾಲೂಕು ಅನುಷ್ಠಾನ ಮಾಡುತ್ತಿದ್ದೆವು ಎಂದು ವಿರೋಧ ಪಕ್ಷದ ಮೇಲೆ ದಾಳಿ ಮಾಡುತ್ತಿದ್ದ ಬಿಜೆಪಿ ಈಗ ಅಧಿಕಾರದಲ್ಲಿರುವುದರಿಂದ ಜನರ ನಿರೀಕ್ಷೆ ದುಪ್ಪಟ್ಟಾಗಿದೆ.

ಕಡಬ ಹಾಗೂ ಕೋಡಿಂಬಾಳ ಗ್ರಾಮಗಳನ್ನೊಳಗೊಂಡ ಗ್ರಾಪಂನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಆದೇಶ ಹೊರಬಿದ್ದಿದೆ. ಮಾತ್ರವಲ್ಲ ತಾಲೂಕು ಪಂಚಾಯಿತಿ ಅನುಷ್ಠಾನಕ್ಕೆ ಗ್ರೀನ್ ಸಿಗ್ನಲ್ ದೊರೆತು ಸಿಬ್ಬಂದಿ ನೇಮಕಾತಿಗೆ ಆದೇಶವಾಗಿ ಆರು ತಿಂಗಳು ಕಳೆದರೂ ಯಾವುದೇ ಪ್ರಯೋಜನ ಕಂಡಿಲ್ಲ. ತಾಲೂಕು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಬೇಕಾದರೆ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಸೂಕ್ತ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಮಿನಿ ವಿಧಾನಸೌಧ ಘೋಷಣೆಗೆ ಸೀಮಿತ ಘೋಷಿತ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿ ವರ್ಷ ಒಂದು ಕಳೆದರೂ ತಾಂತ್ರಿಕ ತೊಂದರೆಗಳ ನೆಪದಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ. ಕಡಬದ ತಹಸೀಲ್ದಾರ್ ಕಚೇರಿ ಬಳಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶಿಲಾನ್ಯಾಸ ನೆರವೇರಿಸಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಮಿನಿ ವಿಧಾನಸೌಧದ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕಡಬ ತಹಸೀಲ್ದಾರ್ ಕಚೇರಿ ಬಳಿ 1.60 ಎಕರೆ ಜಾಗ ಮೀಸಲಿರಿಸಿದ ಬಳಿಕ ಮಿನಿ ವಿಧಾನಸೌಧಕ್ಕೆ ಹತ್ತು ಕೋಟಿ ರೂ. ಬಿಡುಗಡೆಯಾಗಿದೆ ಎಂಬ ಹೇಳಿಕೆಗಳು ಹೊರಬಿದ್ದವು. ಆರಂಭಿಕ ಎರಡು ಕೋಟಿ ರೂ. ಬಿಡುಗಡೆಯಾಗಿದೆ. ಕನಿಷ್ಠ ಆರು ಕೋಟಿ ರೂ. ಬಿಡುಗಡೆಯಾದರೆ ಟೆಂಡರ್ ಆಗಬಹುದು, ಎರಡು ಕೋಟಿಗೆ ಟೆಂಡರ್ ಆಗುವುದೇ ಡೌಟು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ತಾಲೂಕು ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪೂರಕ ಅನುದಾನ ಒದಗಿಸಲಾಗುವುದು. ಹಂತ ಹಂತವಾಗಿ ಇಲಾಖಾ ಕಚೇರಿಗಳನ್ನು ಪ್ರಾರಂಭಿಸುವ ಮೂಲಕ ತಾಲೂಕು ಅನುಷ್ಠಾನಕ್ಕೆ ಒತ್ತು ನೀಡಲಾಗುವುದು. ಮುಂಬರುವ ಅಧಿವೇಶನದಲ್ಲಿ ತಾಲೂಕು ಅನುಷ್ಠಾನಕ್ಕೆ ಅನುದಾನ ಘೋಷಣೆಯಾಗಲಿದೆ ಎನ್ನುವ ಭರವಸೆ ಇದೆ. ಎಸ್.ಅಂಗಾರ, ಶಾಸಕರು