ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ಸಭೆ, ಕಡಬ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.
ಸಭೆ ಉದ್ಘಾಟಿಸಿದ ಕರಾವಳಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ, ಒಕ್ಕೂಟದ ಅಧ್ಯಕ್ಷರು ತಮ್ಮ ಒಕ್ಕೂಟದ ನಿರ್ವಹಣೆಗೆ ಬಹಳಷ್ಟು ಶ್ರಮ ಹಾಕಿರುತ್ತಾರೆ. ಎಲ್ಲರಿಗೂ ಯೋಜನೆಯ ಸೌಲಭ್ಯ ಸುಲಭವಾಗಿ ದೊರೆಯಲು ಒಕ್ಕೂಟದ ಪ್ರಾಮಾಣಿಕ ಕಾರ್ಯವೈಖರಿ ಕಾರಣವಾಗುತ್ತದೆ. ಅಧ್ಯಕ್ಷರು ಒಕ್ಕೂಟದ ಕಣ್ಣಾಗಿ ಕೆಲಸ ನಿರ್ವಹಿಸಿದಲ್ಲಿ ಸದಸ್ಯರ ಕಷ್ಟ ಸುಖಗಳಲ್ಲಿ ಭಾಗಿಯಾಗಲು ಸಾಧ್ಯ ಎಂದರು.
ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಸಂತೋಷ್ ಕೇನ್ಯಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ನಿಕಟಪೂರ್ವ ವಲಯಾಧ್ಯಕ್ಷ ವೇಣುಗೋಪಾಲ ಕಳುವಾಜೆ, ಕಡಬ ವಲಯಾಧ್ಯಕ್ಷ ರಮೇಶ್ ರೈ ಅರ್ಪಾಜೆ, ಸವಣೂರು ವಲಯಾಧ್ಯಕ್ಷ ರಾಮಚಂದ್ರ ಗೌಡ, ನೆಲ್ಯಾಡಿ ವಲಯಾಧ್ಯಕ್ಷ ಕುಶಾಲಪ್ಪ ಗೌಡ, ಗೊಳಿತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಗೌಡ ಅಲೆಕೀ, ಅಲಂಕಾರು ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ ವಂದಿಸಿದರು. ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.
2023-2024ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ಒಕ್ಕೂಟವನ್ನು ಗುರುತಿಸಿ ಒಕ್ಕೂಟದ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ತಾಲೂಕಿನ 63 ಒಕ್ಕೂಟಗಳಲ್ಲಿ ಪ್ರಥಮ ಸ್ಥಾನವನ್ನು ಕಡಬ ವಲಯದ ರಾಮನಗರ ಒಕ್ಕೂಟದ ಅಧ್ಯಕ್ಷೆ ರಝೀಯ ಹಾಗೂ ದ್ವಿತೀಯ ಸ್ಥಾನವನ್ನು ಸವಣೂರು ವಲಯದ ಸವಣೂರು ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡ ಪಡೆದುಕೊಂಡರು. ತಾಲೂಕಿನ ಎಲ್ಲ ಒಕ್ಕೂಟದ ಅಧ್ಯಕ್ಷರನ್ನು ಗೌರವಿಸಲಾಯಿತು.