ವೃದ್ಧ ದಂಪತಿ ವಾಸವಿದ್ದ ಮನೆಯನ್ನು ಅಧಿಕಾರಿಗಳು ಧ್ವಂಸ ಮಾಡಿದ್ದು, ಸದ್ಯ ವಾಸಕ್ಕೆ ಸ್ಥಳವಿಲ್ಲದಂತಾಗಿದೆ. 
ಜಿಲ್ಲೆ

ವೃದ್ಧ ದಂಪತಿಗೆ ಸಿಕ್ಕಿಲ್ಲ ಸೂರು! KADABA

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಐದು ತಿಂಗಳು ಕಳೆದರೂ ಈಡೇರದ ಭರವಸೆ
  • ಕೆಡವಿ ಹಾಕಿದ ಬಳಿಕ ನಿರ್ಲಕ್ಷ್ಯ
  • ಸಹಾಯಕ ಆಯುಕ್ತರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
  • ಶಾಸಕ ಅಶೋಕ್ ರೈ ಸಂಧಾನಕ್ಕೂ ಬೆಲೆಯಿಲ್ಲ
ಪುತ್ತೂರು: ಕಡಬ ತಾಲೂಕು ಆಡಳಿತ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಮ್ಮ ಹಾಗೂ ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಯ ಮನೆ ನೆಲಸಮ ಮಾಡಿದ ವಿಚಾರ ವಿವಾದಕ್ಕೊಳಗಾಗಿ ಸುದ್ದಿಯಾಗಿತ್ತು. ಆಡಳಿತ ಕ್ರಮದ ವಿರುದ್ಧ ದಂಪತಿ ಅಹೋರಾತ್ರಿ ಪ್ರತಿಭಟನೆ ನಡೆಸಿ, ಅಽಕಾರಿಗಳ ಜನಪ್ರತಿನಿಧಿಗಳ ಭರವಸೆ ನೀಡಿದ ಬಳಿಕ ಹಿಂಪಡೆದಿದ್ದರು. ಇದಾಗಿ ಐದು ತಿಂಗಳು ಉರುಳಿದರೂ ಭರವಸೆ ಈಡೇರದ ಹಿನ್ನಲೆಯಲ್ಲಿ ದಂಪತಿ ಸಹಾಯಕ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಹಾಯಕ ಆಯುಕ್ತ ಕಚೇರಿ ಮುಂದೆ ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ಚಿಂತನೆಯಲ್ಲಿದ್ದಾರೆ.
ಮನೆ ಕೆಡವಿ ವರ್ಷ ಕಳೆದರೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡದ ಹಿನ್ನೆಲೆಯಲ್ಲಿ ವೃದ್ಧ ದಂಪತಿ ನೀತಿ ತಂಡದ ಜಯಂತ್ ಟಿ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಆಡಳಿತದ ಮುಂದೆ ೨೦೨೫ರ ಡಿಸೆಂಬರ್ ಅಂತ್ಯಕ್ಕೆ ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದರು. ಪ್ರಾರಂಭದಲ್ಲಿ ತಹಸೀಲ್ದಾರ್ ಆಗಮಿಸಿ ಭರವಸೆ ನೀಡಿದರೂ, ಸೂಕ್ತ ಕ್ರಮ ಆಗದ ಹಿನ್ನಲೆಯಲ್ಲಿ ಮತ್ತೆ ಧರಣಿ ಮುಂದುವರಿಸಿದ್ದರು. ಮರದ ಕೆಳಗೆ ಮೇಲ್ಛಾವಣಿ ಇಲ್ಲದೆ ಸುಮಾರು ೭ ದಿನ ಹೋರಾಟ ನಡೆಸಿದ್ದು, ಅಧಿಕಾರಿಗಳು ಇತ್ತಕಡೆ ಸುಳಿದು ನೋಡಿಲ್ಲ. ವೃದ್ಧ ದಂಪತಿಯ ಆರೋಗ್ಯ ಹದೆಗೆಡುವ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿ ಸಂಧಾನ ಪ್ರಕ್ರಿಯೆ ನಡೆಸಿದ್ದರು.
ಮನೆ ಇದ್ದ ನಿವೇಶನದ ೯೪ಸಿ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದರ ಮರು ಪರಿಶೀಲನೆಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರಿಗೆ ಜಯಂತ್ ಟಿ ನೇತೃತ್ವದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮಾತುಕತೆ ಸಂದರ್ಭ ಹತ್ತು ದಿನದಲ್ಲಿ ೯೪ಸಿ ಅಡಿಯಲ್ಲಿ ಮನೆ ಅಡಿ ಸ್ಥಳ ಹೆಸರಿಗೆ ಮಾಡಿಕೊಡುವ ಭರವಸೆ ಜತೆಗೆ ೨ ಲಕ್ಷ ರೂ. ಅನುದಾನದಲ್ಲಿ ಮನೆ ನೀಡುವ ಭರವಸೆ ನೀಡಿದ್ದರು. ಆದರೆ ಈಗ ಮನೆಯ ಅಡಿ ಸ್ಥಳವೂ ಹೆಸರಿಗೆ ಆಗಿಲ್ಲ, ಮನೆಯೂ ನಿರ್ಮಾಣವೂ ಆಗಿಲ್ಲ.
ಮನೆ ಕೆಡವುವ ಸಂದರ್ಭ ನ್ಯಾಯಾಲಯದ ಆದೇಶದ ಪ್ರಕಾರ ತೆರವು ಪ್ರಕ್ರಿಯೆ ಆಗಿದೆ ಎಂದು ಹೇಳಿಕೊಂಡ ಅಧಿಕಾರಿ ವರ್ಗ ಈಗ ವರಸೆ ಬದಲಾಯಿಸಿ, ಮನೆ ಇರುವ ಸ್ಥಳ ರಸ್ತೆ ಪರಿಧಿಯಲ್ಲಿ ಬರುತ್ತದೆ ಎಂಬ ವರದಿ ನೀಡಿದ್ದಾರೆ. ಈ ಮೂಲಕ ಅಡಿ ಸ್ಥಳವನ್ನು ಸಕ್ರಮ ಮಾಡಲು ಮನಸ್ಸಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಶಾಸಕರ ಭರವಸೆ ಈಡೇರಿಸದ ಸರ್ಕಾರಿ ನೌಕರರ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆ ಸಾಮಾಜಿಕ ಹೋರಾಟಗಾರರದ್ದಾಗಿದೆ.
*ಮನವಿ ಸಲ್ಲಿಕೆ
ವೃದ್ಧ ದಂಪತಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಗತ್ಯ ಕ್ರಮ ಆಗದೆ ಹೋದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಮನವಿ ನೀಡಿದ್ದಾರೆ. ಆ ಬಳಿಕ ಪುತ್ತೂರು ಸಹಾಯಕ ಆಯುಕ್ತರ ಕಚೇರಿಗೂ ಮನವಿ ನೀಡಿದ್ದಾರೆ. ಗುರುವಾರ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ

ವೃದ್ಧ ದಂಪತಿ ವಾರಗಳ ಕಾಲ ಮರದ ಅಡಿಯಲ್ಲಿ ಹಗಲು-ರಾತ್ರಿ ಕುಳಿತರೂ ಅಧಿಕಾರಿಗಳು ಸಮರ್ಪಕ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ತೋರಿದ ಮತ್ತು ಮನೆಯನ್ನು ಧ್ವಂಸ ಮಾಡಿ ನ್ಯಾಯ ಒದಗಿಸಲು ಹಿಂದೇಟು ಹಾಕಿದ ವಿಚಾರದಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಕಂಡು ಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಯಾಗಿದೆ. ಹಾಗೆಂದು ದೂರು ನೀಡಿದವರು ಯಾರೆಂಬ ಮಾಹಿತಿ ಬಹಿರಂಗವಾಗಿಲ್ಲ.

ವಿದ್ಯುತ್, ನೀರಿನ ಸಂಪರ್ಕ ಸ್ಥಗಿತ

ಜನವರಿ ಪ್ರಾರಂಭದಲ್ಲಿ ನಡೆಸಿದ ಅಹೋರಾತ್ರಿ ಧರಣಿಯ ೮ನೇ ದಿನ ಶಾಸಕ ಅಶೋಕ್ ಕುಮಾರ್ ರೈ ಮಾತುಕತೆಯ ಸಂರ್ಭದಲ್ಲಿ ಮೊಬೈಲ್ ಚಾರ್ಜಿಂಗ್ ಮಾಡುವುದಕ್ಕೆ ವಿದ್ಯುತ್ ಸಂಪರ್ಕವಿಲ್ಲ. ಇದಕ್ಕೆ ತ್ವರಿತ ವ್ಯವಸ್ಥೆ ಮಾಡಬೇಕೆಂದು ಕೇಳಿದ್ದು, ಎರಡೇ ದಿನದಲ್ಲಿ ವಿದ್ಯುತ್ ಸಂಪರ್ಕ ಒದಗಿಸುವ ಭರಸೆಯನ್ನು ನೀಡಲಾಗಿತ್ತು. ಪ್ರತಿಭಟನೆಯ ಬಳಿಕ ಮನೆ ಒಡೆದ ಸ್ಥಳದಲ್ಲೇ ವಾಸವಾಗಿರುವ ವೃದ್ಧ ದಂಪತಿಗೆ ಪಂಚಾಯಿತಿ ಕಡೆಯಿಂದ ಇದ್ದ ನಳ್ಳಿ ನೀರಿನ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಿದ್ದಾರೆ.
"

ಸಮಸ್ಯೆಯನ್ನು ತ್ವರಿತ ವಿಲೇವಾರಿ ನಡೆಸುವಂತೆ ಜಿಲ್ಲಾಧಿಕಾರಿಗಳು ಹಿಂಬರಹ ನೀಡಿದ್ದಾರೆ. ಇನ್ನೂ ಜಾಗದ ದಾಖಲೆಗಳು ನಮ್ಮ ಕೈಸೇರಿಲ್ಲ. ಈ ಕಾರಣಕ್ಕೆ ಮತ್ತೆ ಪ್ರತಿಭಟನೆಗೆ ಮುಂದಾಗುತ್ತಿದ್ದೇವೆ. ಮಳೆಗಾಲದಲ್ಲಿ ಎಲ್ಲಿ ಆಶ್ರಯ ಪಡೆಯುವುದು ಎಂಬ ಚಿಂತೆ ಕಾಡುತ್ತಿದೆ.

— ಸುಬ್ರಹ್ಮಣ್ಯ ವೃದ್ಧ ದಂಪತಿ ಪುತ್ರ