ಸೊರಬ/ಆನವಟ್ಟಿ: ಕ್ಷೇತ್ರದ ಜನತೆಗೆ ನೀರಾವರಿ ಯೋಜನೆಗಳ ಕಲ್ಪಿಸಲು ನಡೆಸಿದ ಹೋರಾಟದ ಫಲವಾಗಿ ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳು ಅನುಷ್ಠಾನವಾಗಿವೆ. ಶೀಘ್ರದಲ್ಲಿಯೇ ಬಹುನಿರೀಕ್ಷಿತ ಕಚವಿ ನೀರಾವರಿ ಯೋಜನೆಯೂ ಪೂರ್ಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಭಾನುವಾರ ತಾಲೂಕಿನ ತಲಗಡ್ಡೆ ಗ್ರಾಪಂ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಸ್ವಚ್ಛ ಸಂಕೀರ್ಣ ಘಟಕ ಹಾಗೂ ಕೋಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ಜನತೆಯ ಪ್ರೀತಿ ವಿಶ್ವಾಸದ ಮೇಲೆ ನಂಬಿಕೆಯಿಟ್ಟು ತಂದೆ ಬಂಗಾರಪ್ಪ ಅವರ ಹಾದಿಯಲ್ಲಿ ಹೋರಾಟವನ್ನು ಮಾಡಿದ್ದೇನೆ. ಜನರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಪಾದಯಾತ್ರೆಯ ಹೋರಾಟ ನಡೆಸಿದ್ದರ ಪರಿಣಾಮ ಮೂಡಿ, ಮೂಗೂರು ಏತ ನೀರಾವರಿ ಸೌಲಭ್ಯ ದೊರೆಯಿತು. ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಚವಿ ಏತ ನೀರಾವರಿ ಯೋಜನೆ ಶೀಘ್ರವೇ ಅನುಷ್ಠಾನವಾಗಿ ಸುಮಾರು 32 ಸರಣಿ ಕೆರೆಗಳಿಗೆ ನೀರುಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಜನತೆ ಹಲವಾರು ಅಹವಾಲುಗಳನ್ನು ಸಲ್ಲಿಸಿದ್ದಾರೆ. ಜನರ ಸಮಸ್ಯೆಗಳನ್ನು ಮತ್ತು ಬೇಕು ಬೇಡಿಕೆಗಳನ್ನು ಹಂತ ಹಂತವಾಗಿ ಪೂರ್ಣ ಮಾಡಲಾಗುವುದು. ತಾಲೂಕಿನಲ್ಲಿಯೂ ಕೆಲ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಗೆ 100 ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಳಿ ಕೇಳಲಾಗಿದೆ. ತಾಲೂಕಿನಲ್ಲಿ ಕನಿಷ್ಠ 20 ಹೊಸ ಬಸ್‌ಗಳ ಅವಶ್ಯಕತೆ ಇದೆ. ಜನತೆ ತಾಳ್ಮೆಯಿಂದ ಸಹಕಾರ ನೀಡಿದರೆ. ಶೀಘ್ರವೇ ಬೇಡಿಕೆಗಳು ಈಡೇರಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಆರ್.ಟಿ.ಮಂಜುನಾಥ್ ಮಾತನಾಡಿ, ತಲಗಡ್ಡೆ ಸುತ್ತಲಿನ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರೌಢ ಶಾಲೆಯ ಅವಶ್ಯಕತೆ ಇದೆ. ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಿದ ನಿರೀಕ್ಷಣಾ ಮಂದಿರ ದುಸ್ಥಿತಿಯಲ್ಲಿದ್ದು ಅಭಿವೃದ್ಧಿಗೊಳಿಸಬೇಕು. ಎಸ್ಸಿ ಕಾಲನಿಯಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಗೃಹಲಕ್ಷ್ಮೀ ಮಂಜೂರಾತಿ ಪತ್ರವನ್ನು ವಿತರಿಸಿ, ಮಹಿಳಾ ಪೌರ ಕಾರ್ಮಿಕ ಸನ್ಮಾನಿಸಲಾಯಿತು. ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ತಹಸೀಲ್ದಾರ್ ಹುಸೇನ್ ಸರಕಾವಸ್, ಡಿಡಿಪಿಐ ಪರಮೇಶ್ವರಪ್ಪ, ಬಿಇಒ ಸತ್ಯನಾರಾಯಣ, ತಾಪಂ ಇಒ ಡಾ. ಎನ್.ಆರ್. ಪ್ರದೀಪ್‌ಕುಮಾರ್, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ತಾಪಂ ಮಾಜಿ ಅಧ್ಯಕ್ಷರಾದ ಎಚ್.ಗಣಪತಿ, ಸದಾನಂದಗೌಡ ಬಿಳಗಲಿ, ಗ್ರಾಪಂ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸದಸ್ಯರಾದ ಸೈಫುಲ್ಲಾ ಖಾನ್, ಹೇಮಾವತಿ, ಷಹಜಾದ್, ಕರಿಬಸಮ್ಮ, ನಾಗರಾಜ ಗೌಡ, ಶಿವಶಂಕರ, ಚಿತ್ರಮ್ಮ, ರಾಮಪ್ಪ, ಸುನೀತಾ, ಚಂದ್ರಶೇಖರ ಗೌಡ, ಪಿಡಿಒ ಶಿವರಾಜ್, ಮುಖಂಡರಾದ ಆರ್.ಸಿ. ಪಾಟೀಲ್, ಕೆ.ಪಿ.ರುದ್ರಗೌಡ, ಎಂ.ಡಿ.ಶೇಖರ್, ಮೋಹನ್‌ಗೌಡ ಇತರರಿದ್ದರು.
ಶಾಲೆಗಳ ಅಭಿವೃದ್ಧಿ
ತಾಲೂಕಿನಲ್ಲಿ ಮಾತ್ರವಲ್ಲದೇ ರಾಜ್ಯದ 224 ಕ್ಷೇತ್ರಗಳ ಶಾಲೆಗಳಲ್ಲೂ ಅನೇಕ ಸಮಸ್ಯೆಗಳಿವೆ. ಶಾಲಾ ಕೊಠಡಿಗಳ ನಿರ್ಮಾಣವಾಗಬೇಕು. ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಶಿಕ್ಷಣ ಸಚಿವನಾಗಿ ಮಾದರಿಯಾಗುವಂತೆ ಶಾಲೆಗಳನ್ನು ಅಭಿವೃದ್ಧಿಗೊಳಿಸುವೆ ಎಂದು ಮಧು ಬಂಗಾರಪ್ಪ ಹೇಳಿದರು. ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ವಿರೋಧ ಪಕ್ಷದವರಿಗೆ ಟೀಕೆ ಮಾಡುವುದೆ ಕೆಲಸವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಡ ಜನತೆ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಸ್ಪಷ್ಟಪಡಿಸಿದರು.