ಎಚ್.ಡಿ.ಕೋಟೆ : ತಾಲೂಕಿನ ಕಬಿನಿ ಜಲಾಶಯ ಮೇ ತಿಂಗಳಿಂದ ಆಗಸ್ಟ್‌ವರೆಗೆ ಐದು ಬಾರಿ ಭರ್ತಿಯಾಗಿದೆ.
ಕೇರಳದ ವಯನಾಡು ಮತ್ತು ಕಲ್ಪೆಟ್ಟ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, 60 ಮಿ.ಮೀ.ಗೂ ಹೆಚ್ಚು ಮಳೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಕೇರಳ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದ ಪಾಪನಾಸಿನಿ ಹೊಳೆ ಸೇರಿದಂತೆ ಸುಮಾರು 22 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಗೆ ಒಂದೂವರೆ ಅಡಿಯಷ್ಟೇ ಬಾಕಿ ಇದೆ. ಜಲಾಶಯದ ಭದ್ರತಾ ದೃಷ್ಟಿಯಿಂದ 23,843 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಎರಡು ತಿಂಗಳಿಂದ ಬಿದ್ದ ಮಳೆಯಿಂದ ಜಲಾಶಯಕ್ಕೆ 84 ಟಿಎಂಸಿ ನೀರು ಹರಿದು ಬಂದಿದ್ದು 80 ಟಿಎಂಸಿ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗಿದೆ. ಇದರಿಂದ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಈ ವರ್ಷ ಅಂತ್ಯ ಕಾಣಲು ಕಾರಣವಾಗಿದೆ.
ಈಗಾಗಲೇ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆ ಆಗಿ ಬೀಚನಹಳ್ಳಿ-ಬಿದರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡು 20ಕ್ಕು ಹೆಚ್ಚು ಗ್ರಾಮಗಳು ಸರಗೂರು ಮಾರ್ಗವಾಗಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಕೇರಳದಲ್ಲಿ ಇನ್ನೂ ಎರಡು ದಿನ ಮಳೆ ಆಗುವ ಮುನ್ಸೂಚನೆ ಇದ್ದು ಬಾರಿ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದುಬರಲಿದೆ ಎನ್ನಲಾಗಿದೆ.
ಜಲಾಶಯದ ಸರಾಸರಿ ನೀರಿನ ಸಾಮರ್ಥ್ಯ 19.30 ಟಿಎಂಸಿ ಇದ್ದು ಪ್ರಸ್ತುತ ಜಲಾಶಯದಲ್ಲಿ 18.40 ಟಿಎಂಸಿ ಶೇಖರಣೆ ಆಗಿದೆ. ಸೋಮವಾರದಂದು ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಇದ್ದು, ಕನಿಷ್ಠ ಮಟ್ಟ 2283.68 ಅಡಿ ತಲುಪಿದೆ. ಒಳಹರಿವು 26,450 ಕ್ಯೂಸೆಕ್ ಇದ್ದು, 25,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಕೇರಳದ ವಯನಾಡು ಮತ್ತು ಕಲ್ಪೆಟ್ಟ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ. ಜಲಾಶಯದ ಭದ್ರತಾ ದೃಷ್ಟಿಯಿಂದ 25,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಗಣೇಶ್ ಎಇಇ ಕಬಿನಿ ಜಲಾಶಯ