ಯಳಂದೂರು : ದೇಸಿ ಆಟಗಳು ನಮ್ಮ ದೇಶದ ಹೆಮ್ಮೆಯ ಪ್ರತೀಕ. ಅವುಗಳನ್ನು ಜೀವಂತವಾಗಿರಿಸಬೇಕು ಎಂದು ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಹೇಳಿದರು. ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಸಾಲ್ಟ್ ಸಿಟಿ ಬಾಯ್ಸ ಬಳಗದ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್ ಅವರ 2 ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕಬಡ್ಡಿ, ಖೋಖೋ, ಕುಸ್ತಿ ಸೇರಿದಂತೆ ವಿವಿಧ ಕ್ರೀಡೆಗಳು ನಮ್ಮ ಅಪ್ಪಟ ದೇಸಿ ಕ್ರೀಡೆಗಳಾಗಿವೆ. ಇವು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಬೇಡುವ ಆಟಗಳಾಗಿವೆ. ಈ ಆಟಗಳಲ್ಲಿ ಅನೇಕರು ಜಾಗತಿಕ ಮಟ್ಟದಲ್ಲಿ ಸಾಧನೆ ತೋರಿದ್ದಾರೆ. ಇದನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ದೇಶದಲ್ಲಿ ಅನೇಕ ಜಾಗತಿಕ ಮಟ್ಟದ ಕ್ರೀಡಾಕೂಟಗಳು ನಡೆಯುತ್ತಿವೆ. ನಮ್ಮ ನೆಲದ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಲ್ಟ್ ಸಿಟಿ ಬಾಯ್ಸ ಬಳಗದ ಸದಸ್ಯರು ಕಾಳಜಿ ವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಮಾತನಾಡಿ, ಕಬಡ್ಡಿ ಪಂದ್ಯದಲ್ಲಿ ನಮ್ಮ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಚಿತ್ರನಟ ಪುನೀತ್ ರಾಜ್ ಕುಮಾರ್ ಕೂಡ ಕ್ರೀಡೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಅವರ ನೆನಪಿನಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಈ ಕ್ರೀಡಾಕೂಟದಲ್ಲಿ 24 ತಂಡಗಳು ಸ್ಪರ್ಧಿಸಿರುವುದು ಶ್ಲಾಘನೀಯ ಎಂದರು. ಗುಂಬಳ್ಳಿ ಗ್ರಾಪಂ ಅಧ್ಯಕ್ಷೆ ಮೀನಾ ಗೋವಿಂದರಾಜು ಮಾತನಾಡಿದರು. ಗ್ರಾಪಂ ಸದಸ್ಯರಾದ ಕೆ. ಮಾದೇಶ್, ಪುಟ್ಟಮಾದೇವಮ್ಮ ವೆಂಕಟೇಶ್, ಎನ್. ಮಾದೇಶ್, ಸಾಲ್ಟ್ ಸಿಟಿ ಬಾಯ್ಸ ಬಳಗದ ಸದಸ್ಯರು, ತಾಲೂಕಿನ ನೂರಾರು ಕ್ರೀಡಾಸಕ್ತರು ಹಾಜರಿದ್ದರು.