ನಿಶಾಂತ್ ಬಿಲ್ಲಂಪದವು ವಿಟ್ಲ
ರಸ್ತೆ ಅಭಿವೃದ್ಧಿ ಕೆಲಸಕ್ಕೆ ಗುದ್ದಲಿ ಪೂಜೆ ನಡೆದು ಐದು ವರ್ಷವಾಗುತ್ತ ಬಂದರೂ ರಾಜ್ಯ ಹೆದ್ದಾರಿ 101ರಲ್ಲಿ ಡಾಂಬರು ಕಾಣದ ಪರಿಸ್ಥಿತಿ... ಇಲ್ಲಿವರೆಗೆ ಮೂರು ಬಾರಿ ಕಾಮಗಾರಿಯ ನಾಟಕವಾಡಿದ ಗುತ್ತಿಗೆದಾರ.. ವಿಸ್ತರಣೆಯೂ ಆಗದೆ ಇರುವ ರಸ್ತೆಗೆ ಡಾಂಬರೂ ಇಲ್ಲದೆ ಸಂಕಷ್ಟದ ಮಧ್ಯೆಯೇ ಜನ ಓಡಾಡಬೇಕಾದ ಪರಿಸ್ಥಿತಿ.
ಇದು ಸುರತ್ಕಲ್ -ಕಬಕ ರಾಜ್ಯ ಹೆದ್ದಾರಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಬಕ -ಕಡಂಬು ನಡುವಿನ ರಸ್ತೆಯ ಸದ್ಯದ ಸ್ಥಿತಿ. ಕಬಕ -ಕಡಂಬು ನಡುವಿನ 9.60 ಕಿ.ಮೀ. ವ್ಯಾಪ್ತಿಯ ರಸ್ತೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆಗೊಳಿಸಿ ಅಗಲಗೊಳಿಸಲು 2016ರ ಆಗಸ್ಟ್ 2ರಂದು ಗುದ್ದಲಿಪೂಜೆ ನಡೆದಿತ್ತು. ಮಳೆಗಾಲ ಮುಗಿದು ಕಾಮಗಾರಿ ಆರಂಭವಾಗಿ ಜನವರಿ ಸಂದರ್ಭ ವಿಸ್ತರಿತ ಉತ್ತಮ ರಸ್ತೆಯಲ್ಲಿ ಪ್ರಯಾಣ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಈ ಭಾಗದ ಜನ, ವಾಹನ ಸವಾರರು ಕಾದಿದ್ದರು.
ಆದರೆ ಶಿಲಾನ್ಯಾಸ ಆಗಿ ವರ್ಷ ಐದಾಗುತ್ತ ಬಂದರೂ ರಸ್ತೆ ಸ್ಥಿತಿ ಹಿಂದಿನಂತೆಯೇ ಇದೆ. ಪ್ರತಿವರ್ಷ ಮಳೆಗಾಲ ಮುಗಿಯುತ್ತಿದ್ದಂತೆ ಜನ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡುತ್ತಿದ್ದಂತೆ ವಿವಿಧ ಯಂತ್ರಗಳು ರಸ್ತೆಗೆ ಇಳಿದು ನಿಲ್ಲುತ್ತವೆ. ಜನರ ಆಕ್ರೋಶ ಕಡಿಮೆಯಾಗುತ್ತಿದ್ದಂತೆ ಒಂದೊಂದೇ ಯಂತ್ರಗಳು ಮಾಯವಾಗುತ್ತ ರಸ್ತೆ ಕೆಲಸ ಬಾಕಿಯಾಗುತ್ತಲೇ ಇದೆ. ಚುನಾವಣೆ ಸಂದರ್ಭ ರಸ್ತೆ ಅಭಿವೃದ್ಧಿ ಬಗ್ಗೆ ಮಾತನಾಡಿದವರು ಈಗ ಮೌನಕ್ಕೆ ಶರಣಾಗಿದ್ದಾರೆ. ರಸ್ತೆ ವಿಸ್ತರಣೆಗೆಂದು ತಂದು ಹಾಕಿದ್ದ ಜಲ್ಲಿ ಹಲವೆಡೆ ಚರಂಡಿ ಸೇರಿದೆ.
ಪ್ಯಾಕೇಜ್ ರಸ್ತೆಯಾಗಿ ಅನುದಾನ:ಎಸ್‌ಎಚ್‌ಡಿಪಿ(ಸ್ಟೇಟ್ ಹೈವೇ ಡೆವಲಪ್‌ಮೆಂಟ್ ಪ್ರಾಜೆಕ್ಟ್) ಯೋಜನೆ ಮೂಲಕ ಪ್ಯಾಕೇಜ್ ರಸ್ತೆಯಾಗಿ ಇದಕ್ಕೆ ಅನುದಾನ ಬಿಡುಗಡೆಯಾಗಿದ್ದು, ಇದರ ಜತೆಗೆ ಪುತ್ತೂರು ಕ್ಷೇತ್ರದ ಇನ್ನೊಂದು ರಸ್ತೆಯೂ ಈ ಯೋಜನೆಯಲ್ಲಿ ಸೇರಿದೆ. ಒಂದು ಕಾಮಗಾರಿ ಮುಗಿದು, ಇನ್ನೊಂದು ಕಾಮಗಾರಿ ಬಾಕಿಯಾಗಿದ್ದರಿಂದ ಕಾಮಗಾರಿಯ ಅನುದಾನವೂ ಬಿಡುಗಡೆಯಾಗಿರಲಿಲ್ಲ. ಈ ಹಣ ಮಂಜೂರು ಮಾಡಿಸಿಕೊಳ್ಳಲು ಕಳೆದ ವರ್ಷ ಚರಂಡಿ ಸೇರಿದ್ದ ಜಲ್ಲಿ ತೆಗೆದು ರಸ್ತೆಗೆ ಹಾಕಲಾಗಿತ್ತು!
ಮತ್ತೆ ಹೋರಾಟಕ್ಕೆ ಸಿದ್ಧತೆ: ಡಾಂಬರು ಕಾಮಗಾರಿ ವಿಚಾರವಾಗಿ ಬೆಂಗಳೂರು ಮಟ್ಟದ ಅಧಿಕಾರಿಗಳು ಲಾಬಿಗೆ ಒಳಗಾಗಿದ್ದರಿಂದ ರಸ್ತೆ ಕಾಮಗಾರಿ ನನೆಗುದಿದೆ ಬಿದ್ದಿದೆ ಎಂಬ ಆರೋಪ ಸಾರ್ವಜನಿಕರದ್ದು. ಈ ಹಿನ್ನೆಲೆಯಲ್ಲಿ ಸ್ಥಳೀಯ ಹೋರಾಟಗಾರರು ಕಾನೂನು ಹೋರಾಟದ ಹಾದಿ ಹಿಡಿಯುವ ಸಿದ್ಧತೆಯಲ್ಲಿದ್ದಾರೆ.
ಅಲ್ಲಲ್ಲಿ ಹಳ್ಳ ನಿರ್ಮಾಣ: ರಸ್ತೆ ಅತಿ ಹೆಚ್ಚು ಹಾಳಾಗುತ್ತಿದ್ದ ಕಬಕ ಸಮೀಪ ಜಲ್ಲಿ ಸಂಪೂರ್ಣ ತೆಗೆದು ಮತ್ತೆ ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದ್ದರೂ ಕಳಪೆ ಕಾಮಗಾರಿಯಿಂದ ಆ ಭಾಗದಲ್ಲಿ ಮತ್ತೆ ಹಳ್ಳ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾದರೆ ಇನ್ನಷ್ಟು ಹಳ್ಳಗಳು ಈ ರಸ್ತೆಯಲ್ಲಿ ಪ್ರತ್ಯಕ್ಷವಾಗಲಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಯಾದರೂ ಎಸ್‌ಎಚ್‌ಡಿಪಿ ಯೋಜನೆ ಮೂಲಕ ಕಾಮಗಾರಿ ನಡೆದಿರುವ ಕಾರಣ ಕೆಲಸ ಪೂರ್ಣವಾಗದ್ದರಿಂದ ಅವರೂ ಈ ಕಡೆ ಗಮನ ಹರಿಸುತ್ತಿಲ್ಲ.
ಗುತ್ತಿಗೆದಾರನಿಗೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಕಡತವನ್ನು ಸರ್ಕಾರದ ಕಾರ್ಯದರ್ಶಿಗಳಿಗೆ ಕಳುಹಿಸಿ ಆರು ತಿಂಗಳು ಕಳೆಯಿತು. ಅವರಿಂದ ಅಧಿಕೃತ ಮಾಹಿತಿ ಬರುತ್ತಿದ್ದಂತೆ ಮರು ಟೆಂಡರ್ ಮಾಡಿ ಕಾಮಗಾರಿ ನಡೆಸಲಾಗುವುದು. -ವೀರಭದ್ರಯ್ಯ ಚೀಫ್ ಇಂಜಿನಿಯರ್, ಸ್ಟೇಟ್ ಹೈವೇ ಡೆವಲಪ್‌ಮೆಂಟ್ ಪ್ರಾಜೆಕ್ಟ್