ವಿಜಯವಾಣಿ ಸುದ್ದಿಜಾಲ ಕಡಬ
ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮೈಸೂರು ವಿಭಾಗಮಟ್ಟದ 14, 17ರ ವಯೋಮಾನದ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾಟ ಸೆ.27 ಮತ್ತು 28ರಂದು ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜನಾ ಸಮಿತಿ ಸಂಚಾಲಕ ಕೇಶವ ಅಮೈ ಹೇಳಿದರು.
ದ.ಕ., ಉಡುಪಿ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜ ನಗರ, ಚಿಕ್ಕಮಗಳೂರು ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ರತಿ ಜಿಲ್ಲೆಯಿಂದ 4 ತಂಡಗಳಂತೆ ಒಟ್ಟು 32 ತಂಡಗಳು ಭಾಗವಹಿಸಲಿವೆ ಎಂದು ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
27ರಂದು ಆತೂರು ಸಿಎ ಬ್ಯಾಂಕ್ ಬಳಿಯಿಂದ ನಡೆಯಲಿರುವ ಮೆರವಣಿಗೆಯನ್ನು ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ ಉದ್ಘಾಟಿಸಲಿದ್ದಾರೆ. ಶಿಕ್ಷಕಿ ಹೇಮಲತಾ ಪ್ರದೀಪ ಬಾಕಿಲ ದ್ವಾರ ಉದ್ಘಾಟಿಸಲಿದ್ದಾರೆ. ಯು.ಎ.ಇ.ಯಲ್ಲಿನ ಇಂಜಿನಿಯರ್ ವೀರಪ್ಪ ಪುರಿಕೆರೆ ವಿವಿಧ ಮಳಿಗೆಗಳ ಉದ್ಘಾಟನೆ ನೆರವೇರಸಲಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿರುವ ವಿಜ್ಞಾನಿ ಡಾ.ನೋಣಪ್ಪ ಶ್ರೀ ವಿಶ್ವೇಶತೀರ್ಥ ಸಭಾಂಗಣ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಉಡುಪಿ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಲಿದ್ದಾರೆ. ಶಾಸಕ ಆಶೋಕ್ ಕುಮಾರ್ ರೈ ಧ್ವಜಾರೋಹಣಗೈಯುವರು. ಉದ್ಯಮಿಗಳಾದ ಡಾ.ಕೆ.ವಿ.ಕನಕರಾಜ್, ದೀಪಕ್ ದೀಕ್ಷಿತ್ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಬಳಿಕ ಪಂದ್ಯಾಟ ಆರಂಭವಾಗಲಿದೆ. ಸಂಜೆ 6ರಿಂದ ಆಳ್ವಾಸ್ ಅಂತಾರಾಷ್ಟ್ರೀಯ ಜಾಂಬೂರಿ ಖ್ಯಾತಿಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸತೀಶ್ ಭಟ್ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್., ಪ್ರಧಾನ ಕಾರ್ಯದರ್ಶಿ ಸತೀಶ್ ಭಟ್, ಉಪಾಧ್ಯಕ್ಷ ಸೇಸಪ್ಪ ರೈ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕೆ., ಪ್ರಚಾರ ಸಮಿತಿ ಅಧ್ಯಕ್ಷ ಗಣೇಶ್ ಕಟ್ಟಪುಣಿ ಉಪಸ್ಥಿತರಿದ್ದರು.
ಸಮಾರೋಪ, ಸಾಂಸ್ಕೃತಿಕ ಕಾರ್ಯಕ್ರಮ
ಸೆ.28ರಂದು ಬೆಳಗ್ಗೆ ಉಪಾಂತ್ಯ ಪಂದ್ಯ, ಅಂತಿಮ ಪಂದ್ಯ ನಡೆದು ಮಧ್ಯಾಹ್ನದ ಬಳಿಕ ಸಮಾರೋಪದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ರಾಮಕುಂಜ ಗ್ರಾಪಂ ಸದಸ್ಯ ಸೂರಪ್ಪ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸ್ಯಮಯ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ. ಕ್ರೀಡೆ ಜತೆ ಎರಡು ದಿನಗಳ ಕಾಲ ಕೃಷಿ ಮೇಳ, ವಾಣಿಜ್ಯ ಮೇಳ, ಶೈಕ್ಷಣಿಕ ಮೇಳ, ಆಹಾರ ಮೇಳ, ಸಾಂಸ್ಕೃತಿಕ ಮೇಳ, ವಿಜ್ಞಾನ ಮೇಳ ನಡೆಯಲಿದೆ. 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಕ್ರೀಡೆ ವೀಕ್ಷಣೆಗೆ ಸೂಕ್ತ ಸ್ಥಳಾವಕಾಶ ಮಾಡಲಾಗಿದೆ. 5 ಎಲ್‌ಇಡಿ ಪರದೆ ಅಳವಡಿಸಲಾಗುವುದು. ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು.