ಜಿಲ್ಲೆ

ಹೆಣ್ಣುಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ: ಪಾಲಕರಿಗೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಎನ್‌.ಉಷಾರಾಣಿ ಧನ್ಯವಾದ

ಮಂಡ್ಯ: ನಗರದ ಪಿಇಎಸ್‌ ಇಂಜಿನಿಯರಿಂಗ್ ಕಾಲೇಜಿನ ಚೌಡಯ್ಯ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌, ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ವತಿಯಿಂದ 2023–24ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಅಂತರ ಕಾಲೇಜುಗಳ ಮಹಿಳಾ ಕ್ರೀಡಾಕೂಟ(ಬೆಂಗಳೂರು ವಿಭಾಗ ಹೊರತುಪಡಿಸಿ) ಕಬಡ್ಡಿ ಚಾಂಪಿಯನ್‌ಶಿಪ್‌ ಟೂರ್ನಿ ನಡೆಯಿತು.

ಟೂರ್ನಿಗೆ ಚಾಲನೆ ನೀಡಿದ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಎನ್‌.ಉಷಾರಾಣಿ ಮಾತನಾಡಿ, ಹೆಣ್ಣುಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿರುವ ಪಾಲಕರಿಗೆ ಧನ್ಯವಾದಗಳು. ಮಹಿಳೆಯರು ಮನೆಯಿಂದ ಹೊರಗಡೆ ಬರಬಾರದು ಎಂಬ ಕಟ್ಟು ಪಾಡುಗಳು ಕೆಲವು ಕಡೆಯಿದೆ. ಅದೆಲ್ಲವನ್ನೂ ಮೀರಿ ಕ್ರೀಡೆಯಲ್ಲಿ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಶ್ಲಾಘಿಸಿದರು.

ನಾನು ಸಹ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಕ್ರೀಡಾ ಕೋಟದಲ್ಲಿಯೇ ನಾನು ಕೂಡ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದೇನೆ. ಕ್ರೀಡೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವುದರಿಂದ ಅದರಲ್ಲಿಯೂ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ನಾನೇ ಆಗಿದ್ದೇನೆ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಜಿ.ಓಂಪ್ರಕಾಶ್‌ ಮಾತನಾಡಿ, ನಮ್ಮ ಕ್ರೀಡಾ ಇಲಾಖೆಯಲ್ಲಿ ಹಲವು ಕೋಟಾಗಳು ಇವೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕ್ರೀಡಾ ವಿಭಾಗದಲ್ಲಿ ಕೆಲಸ ಪಡೆದುಕೊಳ್ಳುವ ಕಡೆ ಗಮನಹರಿಸಬೇಕು. ಇದು ಕೂಡ ಭವಿಷ್ಯಕ್ಕೆ ನಾಂದಿಯಾಗಲಿದೆ. ಮೊದಲಿಗೆ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಕಡೆ ಗಮನಹರಿಸಬೇಕು. ಇದು ನಿಮ್ಮನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಸಲಹೆ ನೀಡಿದರು.

ಬೆಳಗಾವಿ ವಿಟಿಯು ಪ್ರಾದೇಶಿಕ ನಿರ್ದೇಶಕ ಮುರುಳೀಧರ್, ದೈಹಿಕ ಶಿಕ್ಷಣ ವಿಭಾಗದ ಪುಟ್ಟಸ್ವಾಮಿಗೌಡ, ಶಿವರಾಮೇಗೌಡ, ಪ್ರಾಂಶುಪಾಲ ಆರ್‌.ಎಂ.ಮಹಾಲಿಂಗೇಗೌಡ ಇತರರಿದ್ದರು.