ಉಳ್ಳಾಲ: ವೀ.ಆರ್.ಯುನೈಟೆಡ್ ತಂಡದ ಆಶ್ರಯದಲ್ಲಿ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್-3 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಸೆ.12ರಿಂದ 14ವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಉಚ್ಚಿಲದಲ್ಲಿ ನಡೆಯಲಿದ್ದು, ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಮಂಗಳೂರು ರತ್ನ 2025 ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೀ ಆರ್ ಯುನೈಟೆಡ್ ಕೋಶಾಧಿಕಾರಿ ಸುದೇಶ್ ಭಂಡಾರಿ ಇರಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಬಡ್ಡಿ ಪಂದ್ಯಾವಳಿಯ ಜತೆ ಆಹಾರ ಹಬ್ಬ, ಮನರಂಜನಾ ಮೇಳ ಮತ್ತು ಸಾಂಸ್ಕೃತಿಕ ಸಡಗರ ಇರಲಿದ್ದು, ಜಿಲ್ಲೆಯ ಎಂಟು ತಂಡಗಳು ಭಾಗವಹಿಸಲಿವೆ. ರಾಜ್ಯದ ಬ್ಯಾಂಕಿಂಗ್ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನೀಡಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ವರ್ಷದ ಮಂಗಳೂರು ರತ್ನ-2025 ಪ್ರಶಸ್ತಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ನೀಡಿ ಗೌರವಿಸಲಾಗುತ್ತದೆ. ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲಾ ಚಾಲನೆ ನೀಡಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಸಹಿತ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಮೂರು ದಿನಗಳಲ್ಲಿ ನಡೆಯುವ ಸಮಾರಂಭದ ತುಣುಕುಗಳನ್ನು ಸೆರೆ ಹಿಡಿದು ರೀಲ್ ಮಾಡಿ, ತಂಡದ ಪೇಜ್‌ಗೆ ಟ್ಯಾಗ್ ಮಾಡಿದಲ್ಲಿ, ಉತ್ತಮವಾದ ರೀಲ್ ಆಯ್ಕೆಗೊಳಿಸುವ ಮೂಲಕ ವಿಜೇತರಿಗೆ ಚಿನ್ನದ ನಾಣ್ಯ ನೀಡಲಾಗುವುದು ಎಂದರು.
ಕಾರ್ಯದರ್ಶಿ ಅಝ್ಫರ್ ರಝಾಕ್, ಉಪಾಧ್ಯಕ್ಷ ಅರುಣ್ ಕುಮಾರ್ ಗಟ್ಟಿ ಅಗರಿಮಾರ್, ಕಬಡ್ಡಿ ರಾಜ್ಯಮಟ್ಟದ ಆಟಗಾರರಾದ ನಿತಿನ್ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಇರಾ ಸುದ್ದಿಗೋಷ್ಠಿಯಲ್ಲಿದ್ದರು.