ಜಿಲ್ಲೆ

ಕಬಡ್ಡಿ ಆಟಗಾರ್ತಿ ಆತ್ಮಹತ್ಯೆ ಪ್ರಕರಣ : ಪತಿ, ಅತ್ತೆಗೆ ಕಠಿಣ ಜೈಲು ಶಿಕ್ಷೆ

ಸೌಮ್ಯ ಆರ್

ಕಾಸರಗೋಡು: ಬೇಡಡ್ಕದ ಚೆರಿಪ್ಪಾಡಿ ನಿವಾಸಿ, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಪ್ರೀತಿ(27)ಎಂಬುವರ ಆತ್ಮಹತ್ಯೆ ಪ್ರಕರಣದ ಅಪರಾಧಿಗಳಾದ ಆಕೆಯ ಪತಿ ಹಾಗೂ ಅತ್ತೆಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶ ವಿ. ಮನೋಜ್ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರೀತಿ ಅವರ ಪತಿ ವೆಸ್ಟ್‌ಎಳೇರಿ ಮಾಙೌಡ್ ಪೊರವಂಕರೆ ನಿವಾಸಿ ರಾಜೇಶ್‌ಕೃಷ್ಣನ್‌ಗೆ(38) 7 ವರ್ಷ ಕಠಿಣ ಜೈಲು ಶಿಕ್ಷೆ, ಆತನ ತಾಯಿ ಶ್ರೀಲತಾಳಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ.ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಇಬ್ಬರೂ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ. ದಂಡದ ಮೊತ್ತವನ್ನು ಮೃತಪಟ್ಟಿರುವ ಪ್ರೀತಿ ಅವರ ಪುತ್ರಿಗೆ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ.

2017 ಆ.18ರಂದು ಪ್ರೀತಿ ಅವರ ಮೃತದೇಹ ಚೆರಿಪ್ಪಾಡಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರೀತಿ ಆತ್ಮಹತ್ಯೆಗೆ ಪತಿ ಹಾಗೂ ಆತನ ತಾಯಿಯ ಪ್ರಚೋದನೆ ಕಾರಣವೆಂದು ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅಂದಿನ ಡಿವೈಎಸ್ಪಿ ಎಂ.ವಿ.ಸುಕುಮಾರನ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.