ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಭಾಗವೇ ಆದ ಕಾವಿ ಕಲೆಯನ್ನು ಉಳಿಸಿ, ಬೆಳೆಸುವಂತಾಗಲು ಇನ್ನಷ್ಟು ಯುವ ಕಲಾವಿದರು ಈ ಕಲೆಯಲ್ಲಿ ತೊಡಗುವಂತಾಗಬೇಕು. ಅಳಿವಿನಂಚಿನಲ್ಲಿದ್ದ ಕರಾವಳಿಯ ಈ ಶ್ರೇಷ್ಠ ಕಲೆಯನ್ನು ಸಂರಕ್ಷಿಸುತ್ತಿರುವ ಹಾಗೂ ಕಲಾಪ್ರದರ್ಶನದ ಮೂಲಕ ಪ್ರಚುರ ಪಡಿಸುತ್ತಿರುವ ಕಲಾವಿದ ಜನಾರ್ದನ್ ಹಾವಂಜೆ ಅವರ ಶ್ರಮ ಶ್ಲಾಘನೀಯ ಎಂದು ಡನ್ ಆ್ಯಂಡ್ ಪಾರ್ಟ್ನರ್ಸ್ನ ಸಂಸ್ಥಾಪಕ ಅರವಿಂದ ಹೆಗಡೆ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರು ಜಯನಗರದ ಯುವಕ ಸಂಘದ ಆರ್ಟ್ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿಯ ಕಲಾವಿದ ಡಾ.ಜನಾರ್ದನ್ ರಾವ್ ಹಾವಂಜೆ ಅವರ ಕಾವ್ಯ ರೇಖಾಕಾವಿ ಕಲೆಯ ಏಕವ್ಯಕ್ತಿ ಕಲಾಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನನ್ನ ಬಾಲ್ಯದ ದಿನಗಳಲ್ಲಿ ಶಿರಸಿಯಲ್ಲಿರುವಾಗ ಪುರಾತನ ಕಟ್ಟಡಗಳಲ್ಲಿ, ದೇಗುಲಗಳಲ್ಲಿ, ವಠಾರಗಳಲ್ಲಿ ಈ ಕಾವಿ ಕಲೆಯನ್ನು ನೋಡುತ್ತಿದ್ದೆ. ಅಂದಿನ ನೆನಪು ಇಂದು ಹಸಿರಾಯಿತು. ಅಂದು ಈ ಕಲೆಯ ಮಹತ್ವ ತಿಳಿದಿರಲಿಲ್ಲ. ಆದರೆ, ವರ್ಣಿಸಲು ಅಸಾಧ್ಯವಾದ ಹಾಗೂ ಚಿತ್ತಾಕರ್ಷಕ ಈ ಕಲೆಯ ಉಳಿವು ಆಗಲೇಬೇಕೆಂದು ಆಶಿಸುತ್ತೇನೆ ಎಂದರು.
ಯುವಕ ಸಂಘದ ಯೋಜನಾ ನಿರ್ದೇಶಕ ಮಹೇಶ್, ಕಾವಿ ಆರ್ಟ್ ಫೌಂಡೇಷನ್ನ ನಿರ್ದೇಶಕಿ ಬೇಬಿ ಎಂ. ರಾವ್ ಉಪಸ್ಥಿತರಿದ್ದರು.
ಬೆಂಗಳೂರು ಕಲಾ ಗ್ಯಾಲರಿಯ ಸಂಯೋಜಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಸುಣ್ಣ ಮತ್ತು ಕೆಮ್ಮಣ್ಣಿನಲ್ಲಿ ಗೀರಿ ನಿರ್ಮಿಸುವ ಈ ಕಾವಿ ಕಲೆ ಕರಾವಳಿ ಭಾಗದ ವಿಶೇಷತೆ. ಇದೊಂದು ದೇಸೀಯ ಕಲೆಯಾಗಿದ್ದು, ಈ ಪ್ರದರ್ಶನದ ಮೂಲಕ ಕರ್ನಾಟಕಕ್ಕೆ ಜಿಯಾಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಹೊಂದುವ ಪ್ರಯತ್ನ ನಡೆಸಲಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ವರ್ಲ್ಡ್ ಹೆರಿಟೇಜ್ ವೀಕ್ ಸಂದರ್ಭದಲ್ಲಿ ಇಲ್ಲಿ ಪ್ರದರ್ಶನಗೊಳ್ಳುತ್ತಿದೆ. | ಡಾ. ಜನಾರ್ದನ್ ರಾವ್ ಹಾವಂಜೆ. ಕಾವಿ ಕಲಾವಿದ, ಉಡುಪಿ