ಹಾವಂಜೆ ಮಂಜುನಾಥ ರಾವ್ ಆಶಯ
ಕ ಕಾ ಕಿ ಕಾರ್ಯಾಗಾರ ಉದ್ಘಾಟನೆ
ಕರಾವಳಿಯ ದೇಸೀಯ ಕಲೆಯಾದ ಹಾಗೂ ಅಳಿವಿನಂಚಿನಲ್ಲಿರುವ ಕಾವಿ ಕಲೆ ಉಳಿಸಿ ಬೆಳೆಸುವುದಕ್ಕಾಗಿ ಶಾಲೆಗಳಲಿ ಕ ಕಾ ಕಿ ಎಂಬ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಪುರಾತನ ಜ್ಞಾನವನ್ನು ಮತ್ತೆ ಪುನರ್ ಮನನ ಮಾಡಿಕೊಳ್ಳುವ ಸಂದರ್ಭ ಇದಾಗಿದ್ದು, ನೂರಾರು ಶಾಲೆಗಳನ್ನಾದರೂ ಈ ಜ್ಞಾನ ತಲುಪುವಂತಾಗಲಿ ಎಂದು ಕಾವಿ ಆರ್ಟ್ ಫೌಂಡೇಷನ್ನ ಅಧ್ಯಕ್ಷ ಹಾವಂಜೆ ಮಂಜುನಾಥ ರಾವ್ ಆಶಿಸಿದರು.
ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಕೀಳಂಜೆಯ ಬಿ.ವಿ.ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವಿ ಆರ್ಟ್ ಫೌಂಡೇಷನ್ ಹಾಗೂ ಭಾವನಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ಶಾಲೆಯಲ್ಲಿ ಕಾವಿಕಲೆಯ ಕಿಶೋರ ಕಾರ್ಯಾಗಾರ(ಕ ಕಾ ಕಿ -01) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿಗಳಾದ ಆನಂದ್ ಕಾರ್ನಾಡ್, ಹಾವಂಜೆ ಗ್ರಾಪಂ ಮಾಜಿ ಅಧ್ಯಕ್ಷ ಉದಯ ಕೋಟ್ಯಾನ್, ಶಾಲಾ ಮುಖೋಪಾಧ್ಯಾಯ ಸಖಾರಾಮ್ ಎಚ್. ಉಪಸ್ಥಿತರಿದ್ದರು. ಅಧ್ಯಾಪಕ ಸುಕೇಶ್ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಶಿಕ್ಷಕಿಯರು ಸಹಕರಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಜನಾರ್ದನ್ ಹಾವಂಜೆ, ವಿಕ್ರಮ್ ಸುವರ್ಣ ಹಾಗೂ ಆಶ್ಲೇಷ್ ಆರ್.ಭಟ್ ಕಾವಿ ಕಲೆಯ ವಿನ್ಯಾಸವನ್ನು ಮಕ್ಕಳಿಗೆ ಕಲಿಸಿದರು.
ಚಿತ್ರ ಪದ್ಧತಿಯಾಗಿ ಬೆಳೆಸುವ ಪ್ರಯತ್ನ
ಕಲಾವಿದ ಡಾ. ಜನಾರ್ದನ್ರಾವ್ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾದ್ಯಂತ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ನಮ್ಮ ಸಾಂಪ್ರದಾಯಿಕ ಕಲೆಯ ತಿಳಿವಳಿಕೆ ನೀಡುವುದು ಕ ಕಾ ಕಿ ಕಾರ್ಯಾಗಾರದ ಉದ್ದೇಶ. ಅಲ್ಲದೆ, ಇದನ್ನು ಚಿತ್ರ ಪದ್ಧತಿಯಾಗಿ ಬೆಳೆಸುವ ಪ್ರಯತ್ನವೂ ಆಗಿದೆ. ಕರ್ನಾಟಕಕ್ಕೆ ಜಿಐ ಟ್ಯಾಗ್ ಹೊಂದುವ ಯೋಜನೆಯೂ ಇಂತಹ ಕಾರ್ಯಾಗಾರದ ಮೂಲಕ ಸಾಕಾರಗೊಳ್ಳಲಿದೆ ಎಂದರು.