ವಿಜಯವಾಣಿ ಸುದ್ದುಜಾಲ ಉಡುಪಿ
ಸಾಂಪ್ರದಾಯಿಕ ಕಲಾ ಪ್ರಕಾರವೊಂದನ್ನು ಕಲಾವಿದ ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಈ ಏಕವ್ಯಕ್ತಿ ಕಲಾ ಪ್ರದರ್ಶನವೇ ನಿದರ್ಶನ. ಕಲಾವಿದ ನಿರಂತರ ಅನ್ವೇಷಣೆಯಲ್ಲಿ ತೊಡಗಿಕೊಂಡಾಗ ಮಾತ್ರ ಅಪೂರ್ವವಾದ ಕಲೆ ಸಿದ್ಧಿಸುತ್ತದೆ ಎಂದು ಹಿರಿಯ ಕಲಾವಿದ ಭಾಸ್ಕರ್ ರಾವ್ ಅನಿಸಿಕೆ ವ್ಯಕ್ತಪಡಿಸಿರು.
ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಷ್ನ್ ಹಾಗೂ ಸಂಸ್ಕಾರ ಭಾರತೀ ಬೆಂಗಳೂರು ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಕಾವಿ ಕಲೆಯ ಡಾ. ಜನಾರ್ದನ್ ರಾವ್ ಹಾವಂಜೆ ಅವರ ಡಿವೈನ್ ಡೈಮೆನ್ಷನ್ಸ್ ಎಂಬ ಏಕವ್ಯಕ್ತಿ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕಲಾವಿದ ಡಾ.ಜನಾರ್ದನ್ ರಾವ್ ಹಾವಂಜೆ, ಪ್ರದರ್ಶನದ ಸಂಯೋಜಕ ಪವನ್ ಎಲ್. ರಾವ್ ಉಪಸ್ಥಿತರಿದ್ದರು. ಸಂಸ್ಕಾರ ಭಾರತೀ ಸಂಸ್ಥೆಯ ಹೇಮಂತ್ ಜೆ. ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಕಾವಿ ಕಲೆಯ ಈ ಕಲಾ ಪ್ರದರ್ಶನದಲ್ಲಿ ಪುರಾಣಿಕ ಕಥಾ ಸಂಯೋಜನೆ, ಮಂಡಲ ವಿನ್ಯಾಸ, ಟ್ರೀ ಆಫ್ ಲೈಫ್ ಮುಂತಾದ 60ಕ್ಕೂ ಹೆಚ್ಚು ಕಲಾಕೃತಿಗಳಿವೆ. ಡಿ.29ರ ವರೆಗೆ ಬೆಳಗ್ಗೆ 10ರಿಂದ ಸಂಜೆ 7:30ರ ವರೆಗೆ ವೀಕ್ಷಣೆಗೆ ಅವಕಾಶವಿದೆ.
ಸಾಂಸ್ಕೃತಿಕ ವೈವಿಧ್ಯತೆಯಿಂದ ಕೂಡಿದ ಭಾರತದಲ್ಲಿ ಅನೇಕ ಕಲಾ ಪ್ರಕಾರಗಳಿವೆ. ಅವುಗಳೆಲ್ಲ ಆಯಾ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಅಂತಹ ಕಲೆಗಳ ಮೌಲ್ಯವರ್ಧಿತ ಸ್ಮರಣಿಕೆಗಳನ್ನು ಸಾಧ್ಯವಾದಷ್ಟು ಹೆಚ್ಚು ರಚಿಸುವಂತೆ ಕಲಾಕಾರರಿಗೆ ಪ್ರೋತ್ಸಾಹ ಸಿಗಬೇಕು. | ಬಾಬು ಹಿರಣ್ಣಯ್ಯ. ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ, ಸಂಸ್ಕಾರ ಭಾರತೀ