ಮೈಸೂರು: ಕಾಟೇರ (Kaatera) ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್ (Master Rohith) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಬಳಿ ಕಾರು-ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ರೋಹಿತ್ ಗಾಯಗೊಂಡಿದ್ದು, ಅವರ ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಖಅಸಗಿ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ಧಾಗ ಅಪಘಾತ ಸಂಭವಿಸಿದ್ದು, ರೋಹಿತ್ ಅವರ ದವಡೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಪ್ಲೇಟ್ ಅಳವಡಿಸಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಅವರ ತಾಯಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ʻಒಂದಲ್ಲ ಎರಡಲ್ಲʼ ಸಿನಿಮಾದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತನಾಗಿದ್ದ ರೋಹಿತ್, ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದರು. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟ ದರ್ಶನ್, ರೋಹಿತ್ ಅವರ ನಟನೆಯನ್ನು ಹಾಡಿಹೊಗಳಿದ್ದರು.