ಕನಕಪುರ : ಅಮರ ಶಿಲ್ಪಿ ಜಕಣಾಚಾರಿ ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ಜಗತ್ತನ್ನೇ ಬೆರಗುಗೊಳಿಸುತ್ತಿವೆ ಎಂದು ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್ ಹೇಳಿದರು.
ನಗರದ ಚನ್ನಬಸಪ್ಪ ವೃತ್ತದಲ್ಲಿ ವಿಶ್ವಕರ್ಮ ಸ್ವಯಂ ಸೇವಾ ಸಂಘ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಂದಿನ ಕಾಲದಲ್ಲಿ ಜಕಣಾಚಾರಿ ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ಜಗತ್ತನ್ನೇ ಬೆರಗುಗೊಳಿಸುತ್ತಿವೆ. ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಮುದಾಯದ ಅಧ್ಯಕ್ಷ ಶಿವರುದ್ರಾಚಾರ್ ಮಾತನಾಡಿ, ಜಗತ್ತಿನ ಅದ್ಬುತ ಶಿಲೆಗಳ ಸಾಲಿನಲ್ಲಿ ನಿಲ್ಲುವ ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿ ಇತರೆ ಸ್ಥಳಗಳಲ್ಲಿ ಜಕಣಾಚಾರಿ ಅವರು ಕಲ್ಲಿನಲ್ಲೇ ಅರಳಿದ ಕಲಾಕೃತಿಗಳನ್ನು ನೋಡುವುದೇ ಒಂದು ಭಾಗ್ಯ. ಮಾಡುವ ಕೆಲಸದ ಬಗ್ಗೆ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿಯಶಸ್ಸು ಸಾಧಿಸಬಹುದು ಎನ್ನುವುದನ್ನು ಜಕಣಾಚಾರಿ ಜಗತ್ತಿಗೆ ಸಾರಿದ್ದಾರೆ. ಇಂತಹ ಮಹಾಪುರುಷರ ಜಯಂತಿಯನ್ನು ದೇಶದಾದ್ಯಂತ ಸ್ಮರಣೆ ಮಾಡಿದರಷ್ಟೇ ಸಾಲದು, ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜ ನಮ್ಮನ್ನು ಸ್ಮರಿಸುವಂತಾಗುತ್ತದೆ ಎಂದರು.
ಸೇವಾ ಸಂಘದ ಅಧ್ಯಕ್ಷ ಶಿವರುದ್ರಾಚಾರ್ ನೇತೃತ್ವದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್‌ನ ಮಲ್ಲಿಕಾರ್ಜುನ್, ತಾ. ಕಸಾಪ ಅಧ್ಯಕ್ಷ ಎಸ್.ಶಿವಲಿಂಗಯ್ಯ, ಮಾಜಿ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ಸಂಘದ ಉಪಾಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ಕುಮಾರ್, ಚಂದ್ರು, ಶಿವರಾಜು, ಕೃಷ್ಣ, ನಾಗರಾಜು, ಮಂಟೇಸ್ವಾಮಿ ಇತರರು ಇದ್ದರು.