_upscale 
ಜಿಲ್ಲೆ

ಕೆ.ಎಸ್.ಈಶ್ವರಪ್ಪ 50 ಸಾವಿರ ಮತ ಪಡೆಯಲ್ಲ

ಲಲಾಟಾಕ್ಷ ಎಸ್

ಪಿರಿಯಾಪಟ್ಟಣ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ 50 ಸಾವಿರ ಮತಗಳನ್ನೂ ಗಳಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಟೀಕಿಸಿದರು.


ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಮತ ಯಾಚಿಸಲು ಮಂಗಳವಾರ ಪಿರಿಯಾಪಟ್ಟಣ ತಾಲೂಕಿಗೆ ಆಗಮಿಸಿದ್ದ ಅವರು ಮಾಜಿ ಶಾಸಕ ಕೆ.ಮಹದೇವ್ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದರು. ಬಿಜೆಪಿ ಪಕ್ಷದಲ್ಲಿ ಇದ್ದ ಕಾರಣ ಅವರು ಫೈರ್ ಬ್ರಾಂಡ್ ಎಂದು ಖ್ಯಾತಿ ಹೊಂದಿದ್ದರು. ಕೆ.ಎಸ್.ಈಶ್ವರಪ್ಪ ಅವರಿಗೆ ಸ್ಥಾನಮಾನ, ವರ್ಚಸ್ಸು ಎಲ್ಲವೂ ಬಿಜೆಪಿಯಿಂದಲೇ ಸಿಕ್ಕಿದ್ದು. ಬಿಜೆಪಿ ಬೆಂಬಲವಿಲ್ಲದ ಅವರ ಪರಿಸ್ಥಿತಿ ವಿದ್ಯುತ್ ಸಂಪರ್ಕವಿಲ್ಲದ ಬಲ್ಬ್ ಮತ್ತು ಸ್ವಿಚ್ ಬೋರ್ಡ್‌ನಂತೆ ಆಗಿದೆ ಎಂದರು.


ಸ್ವಂತ ವರ್ಚಸ್ಸಿನಿಂದ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಫಲಿತಾಂಶದ ಬಳಿಕ ಭ್ರಮನಿರಸನವಾಗಲಿದ್ದಾರೆ. ಪ್ರಳಯವೇ ಆದರೂ ಈಶ್ವರಪ್ಪ ಗೆಲ್ಲಲು ಸಾಧ್ಯವಿಲ್ಲ. ಸ್ವಂತ ವರ್ಚಸ್ಸಿನ ವೋಟುಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಅವರ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಯಾವುದೇ ನಷ್ಟವಾಗುವುದಿಲ್ಲ. ಬಿಜೆಪಿಯಲ್ಲಿದ್ದಾಗ ಅವರಿಗೆ ಒಳ್ಳೆಯ ಘನತೆ, ಗೌರವವಿತ್ತು. ಪಕ್ಷ ಬಿಟ್ಟು ಹೋದ ಮೇಲೆ ಯಾವುದೇ ವರ್ಚಸ್ಸು ಉಳಿದಿಲ್ಲ ಎಂದು ಹೇಳಿದರು.


ರಾಜ್ಯದಲ್ಲಿ ಎನ್‌ಡಿಎ ಮಿತ್ರಕೂಟದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ನೀರಾಯಸವಾಗಿ ಜಯಗಳಿಸಲಿದ್ದಾರೆ. ಜೆಡಿಎಸ್‌ನೊಂದಿಗೆ ಮೈತ್ರಿಯಿಂದಾಗಿ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷದ ಬಲ ವೃದ್ಧಿಸಿದ್ದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಪಕ್ಷದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವಿನ ವಿಶ್ವಾಸದಲ್ಲಿದ್ದಾರೆ ಎಂದರು.