ಕೆ.ಆರ್.ಸಾಗರ: ವಿಶ್ವವಿಖ್ಯಾತ ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಶೀಘ್ರವೇ ಅನುಮತಿ ಸಿಗಲಿದೆ.
ಕರೊನಾ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಏಪ್ರಿಲ್‌ನಿಂದ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದೀಗ ಕರೊನಾ ಜತೆಗೆ ಜೀವನ ಎಂಬ ಧ್ಯೇಯದೊಂದಿಗೆ ಎಲ್ಲ ಕಡೆಯೂ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೃಂದಾವನ ಪ್ರವೇಶಕ್ಕೆ ಅನುಮತಿ ಸಿಗುವ ಕಾಲ ಸನ್ನಿಹಿತವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಮಹಾಲಯ ಅಮಾವಾಸ್ಯೆ ಅಂದರೆ ಸೆ.14 ರ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ. ಆದರೆ, ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ. ಜತೆಗೆ ವಿಶ್ವಪ್ರಸಿದ್ಧ ಮೈಸೂರು ದಸರಾ ಕೂಡ ಸಮೀಪಿಸುತ್ತಿರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಅನುಮತಿ ನೀಡುವ ಬಗ್ಗೆ ಚಿಂತಿಸಲಾಗಿದೆ. ಅಲ್ಲದೆ ಪ್ರವೇಶಕ್ಕೆ ಅನುಮತಿ ಕೋರಿ ಆಗಸ್ಟ್‌ನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಸದ್ಯದ ಮಟ್ಟಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ಬೃಂದಾವನಕ್ಕೆ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕಿದೆ. ಬೃಂದಾವನಕ್ಕೆ ಗುಂಪಾಗಿ ಪ್ರವಾಸಿಗರು ಬರುವ ಕಾರಣ ಕಾವೇರಿ ನೀರಾವರಿ ನಿಗಮ ಎಚ್ಚರಿಕೆಯ ನಡೆ ವಹಿಸಬೇಕಾಗುತ್ತದೆ. ಪ್ರತಿಯೊಬ್ಬರೂ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸುವುದರ ಜತೆಗೆ ಮಾಸ್ಕ್ ಕಡ್ಡಾಯಗೊಳಿಸಬೇಕಿದೆ. ಇನ್ನು ಬೃಂದಾವನಕ್ಕೆ ಪ್ರವೇಶ ನೀಡಿದರೂ, ಪ್ರಾರಂಭದಲ್ಲಿಯೇ ಹೆಚ್ಚಿನ ಜನರು ಬರುವ ನಿರೀಕ್ಷೆ ಇಲ್ಲ. ಹಂತ ಹಂತವಾಗಿ ಸಂಖ್ಯೆ ಹೆಚ್ಚಬೇಕಿದೆ.
ಕೋಟ್ಯಂತರ ರೂ ನಷ್ಟ: ಬೃಂದಾವನಕ್ಕೆ ಬೀಗ ಹಾಕಿದ ಪರಿಣಾಮ ಸುಮಾರು 5.50 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬೃಂದಾವನಕ್ಕೆ ಬರುವ ಪ್ರವಾಸಿಗರ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಹಾಗೂ ಕೆಳ ಸೇತುವೆ ಪ್ರವೇಶ ಶುಲ್ಕ ಪಡೆಯುವ ಹಕ್ಕನ್ನು ವರ್ಷಕ್ಕೆ 13 ಕೋಟಿ ರೂ.ನಂತೆ ಬೆಂಗಳೂರಿನ ಖಾಸಗಿ ಕಂಪನಿ ಬಿಡ್‌ನಲ್ಲಿ ಪಡೆದಿತ್ತು. ಅಂತೆಯೇ, ಪ್ರತಿ ತಿಂಗಳು ಈ ಕಂಪನಿ 1.5 ಕೋಟಿ ರೂ.ನಂತೆ(ಜಿಎಸ್‌ಟಿ ಪ್ರತ್ಯೇಕ) ಪಾವತಿಸುತ್ತಿದೆ. ಇದಲ್ಲದೆ, ಬೃಂದಾವನದಲ್ಲಿ ವ್ಯಾಪಾರ, ವಹಿವಾಟು ನಡೆಯದೆ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೃಂದಾವನ ನಿಷೇಧ ಮಾಡಿರುವುದು ಇದು ಎರಡನೇ ಬಾರಿ. ಈ ಮೊದಲು ಅಂದರೆ ಕಾವೇರಿ ವಿವಾದ ಹೆಚ್ಚಾಗಿ ಪ್ರತಿಭಟನೆಗಳು ಜೋರಾಗಿ ನಡೆದ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.