ಅರಕೇರಾ: ಏಕಾಏಕಿ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದು ಖಂಡನೀಯ ಎಂದು ವಾಲ್ಮೀಕಿ ಮಹಾಸಭಾದ ತಾಲೂಕು ಸಂಚಾಲಕ ಮುದ್ದಣ್ಣ ನಾಯಕ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಎನ್. ರಾಜಣ್ಣ ಅವರು ಸಹಕಾರ ಸಚಿವರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೀನ ದಲಿತರ ಪರ ನಿಲ್ಲುವ ಅವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ. ವಾಲ್ಮೀಕಿ ಸಮಾಜದವರು ನೇರ, ನಿಷ್ಠುರವಾದಿಯಾಗಿ ಕೆಲಸ ಮಾಡಬಾರದೇ ಎಂದು ಪ್ರಶ್ನಿಸಿದರು. ಮಾಜಿ ಸಚಿವ ಬಿ.ನಾಗೇಂದ್ರ ಬಳಿಕ ರಾಜಣ್ಣ ಎರಡನೇ ಬಲಿ.
ಇದು ವಾಲ್ಮೀಕಿ ಸಮಾಜದ ಬೆಳವಣಿಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರವಾಗಿದೆ. ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಮಾಜದಿಂದ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಮಲ್ಲಿಕಾರ್ಜುನ ನಾಯಕ ಪಡಗಿನದೊಡ್ಡಿ, ರಂಗಪ್ಪ ನಾಯಕ ಗಾಲಿ, ಶರಣಪ್ಪ ನಾಯಕ, ಹನುಮೇಶ ನಾಯಕ, ಶಿವಕುಮಾರ ನಾಯಕ, ಸಾಬಣ್ಣ ನಾಯಕ, ಶಿವರಾಯ ನಾಯಕ, ವೆಂಕಟೇಶ ನಾಯಕ ಇದ್ದರು.