ಮೂಗಿನ ತುದಿಯಲ್ಲಿ ಕೋಪ, ಸಣಕಲು ಶರೀರ, ಅರಣ್ಯ-ಪ್ರಾಣಿಗಳ ಬಗ್ಗೆ ಅಗಾಧ ಜ್ಞಾನ... ಇದು ಸೋಮವಾರ ನಿಧನರಾದ ನಿವೃತ್ತ ಅರಣ್ಯಾಧಿಕಾರಿ ಕೆ.ಎಂ. ಚಿಣ್ಣಪ್ಪ (೮೪) ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ. ನಾಗರಹೊಳೆ ಅರಣ್ಯ ಇಂದಿನ ಈ ಮಟ್ಟಿಗೆ ಉಳಿದುಕೊಂಡಿರುವುದರ ಹಿಂದೆ ಚಿಣ್ಣಪ್ಪ ಅವರ ಮಹತ್ವದ ಪಾತ್ರವನ್ನು ಯಾರೂ ಅಲ್ಲಗೆಳೆಯುವುದಿಲ್ಲ. ಅವರ ಈ ಹಾದಿಯಲ್ಲಿ ಅಭಿಮಾನಿಗಳಷ್ಟೇ ಸಂಖ್ಯೆಯಲ್ಲಿ ವಿರೋಧಿಗಳೂ ಹುಟ್ಟಿಕೊಂಡಿದ್ದರು.
ದಕ್ಷಿಣ ಕೊಡಗಿನ ಕುಮಟೂರು ಗ್ರಾಮದ ವೀರ ಸೈನಿಕರ ಕುಟುಂಬದಲ್ಲಿ ೧೯೪೧ರಲ್ಲಿ ಜನಿಸಿದವರು ಕೊಟ್ರಂಗಡ ಎಂ. ಚಿಣ್ಣಪ್ಪ. ತಂದೆ ಸೈನಿಕರಾಗಿದ್ದವರು. ನಿವೃತ್ತಿ ನಂತರ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಚಿಣ್ಣಪ್ಪ ೧೯೬೭ರಲ್ಲಿ ಅರಣ್ಯಾಧಿಕಾರಿಯಾಗಿ ಅರಣ್ಯ ಇಲಾಖೆಗೆ ಸೇರಿದರು. ೧೯೯೩ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ತನಕ ಮತ್ತು ನಂತರವೂ ಮುಂಚೂಣಿಯ ಅರಣ್ಯ ಯೋಧರಾಗಿಯೇ ಸೇವೆ ಸಲ್ಲಿಸುವ ಮೂಲಕ ನಾಗರಹೊಳೆಗೆ ತಮ್ಮ ವಿಶೇಷ ಸೇವೆ ಸಲ್ಲಿಸಿದರು.
ಚಿಣ್ಣಪ್ಪ ಅವರ ವೃತ್ತಿಜೀವನದ ಬಹುಪಾಲು ನಾಗರಹೊಳೆಯಲ್ಲಿ ರೇಂಜರ್ ಆಗಿಯೇ ಸೇವೆ ಸಲ್ಲಿಸಿದರು. ತಮ್ಮ ವೃತ್ತಿಯುದ್ದಕ್ಕೂಕ್ಕೂ ಎಂದಿಗೂ ಅವರು ಅಕ್ರಮಗಳ ಜತೆಗೆ ರಾಜಿ ಮಾಡಿಕೊಂಡವರಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡವರೂ ಅಲ್ಲ. ಚಿಣ್ಣಪ್ಪ ನಾಗರಹೊಳೆಯಲ್ಲಿ ರೇಂಜರ್ ಆಗಿ ಸೇರಿದಾಗ ಇಲ್ಲಿ ಮರದ ಕಳ್ಳಸಾಗಣೆ, ಗಾಂಜಾ ಬೆಳೆಯುವುದು, ಅಕ್ರಮ ಬೇಟೆ, ದನ ಮೇಯಿಸುವುದು, ಕಳ್ಳಭಟ್ಟಿ ತಯಾರಿಕೆ ಹೀಗೆ ಹಲವು ಬಗೆಯ ಅಪರಾಧಗಳ ತಾಣ ಆಗಿತ್ತು.
ಚಿಣ್ಣಪ್ಪ ನಾಗರಹೊಳೆಗೆ ಬರುತ್ತಿದ್ದಂತೆಯೇ ಎಲ್ಲಾ ಅಕ್ರಮಗಳಿಗೂ ಒಂದೊಂದಾಗಿ ಕಡಿವಾಣ ಹಾಕುತ್ತಾ ಬಂದರು. ಕಡಿಮೆ ಇರುವ ಹುಲಿಗಳ ಸಂಖ್ಯೆ, ಹೆಚ್ಚು ಇರುವ ಜಿಂಕೆಗಳ ಸಂಖ್ಯೆಯಿಂದ ಆಗುವ ಅಪಾಯಗಳ ಅರಿವು ಚಿಣ್ಣಪ್ಪ ಅವರಿಗಿತ್ತು. ಇದಕ್ಕೊಂದು ವೈಜ್ಞಾನಿಕ ತಳಹದಿ ರೂಪಿಸಲು ಮೊದಲು ಅರಣ್ಯವನ್ನು ಅಕ್ರಮ ಚಟುವಟಿಕೆಗಳಿಂದ ಮುಕ್ತ ಮಾಡಬೇಕಿತ್ತು. ಈ ಕೆಲಸದಲ್ಲಿ ಅವರು ಯಶಸ್ವಿಯೂ ಆದರು.
ಚಿಣ್ಣಪ್ಪ ನಾಗರಹೊಳೆಗೆ ಬಂದಾಗ ಕೇವಲ ೨೫೦ ಚ.ಕಿ.ಮೀ ಅರಣ್ಯ ಪ್ರದೇಶ ಇತ್ತು. ಈಗ ಇದು ೬೫೩ ಚ.ಕಿ.ಮೀ.ಗೂ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿದೆ. ವನ್ಯಜೀವಿ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭ ಚಿಣ್ಣಪ್ಪ ಹಲವರನ್ನು ಎದುರು ಹಾಕಿಕೊಳ್ಳಬೇಕಾಯಿತು. ೧೯೭೦ರಲ್ಲಿ ಅವರು ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಾಗ ಶಸ್ತ್ರಸಜ್ಜಿತವಾದ ತಂಡ ಇವರ ಮೇಲೆ ದಾಳಿಗೆ ಯತ್ನಿಸಿತ್ತು. ಈ ವೇಳೆ ಅವರು ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿದ್ದರು.
ಚಿಣ್ಣಪ್ಪ ಅವರ ಮೇಲೆ ಮೇಲೆ ಕೊಲೆಯ ಆರೋಪವೂ ಬಂದಿತ್ತು. ಇದಕ್ಕಾಗಿ ೧೨ ದಿನ ಜೈಲಿಗೂ ಹೋಗಿ ಬಂದಿದ್ದರು. ೧೯೯೨ರಲ್ಲಿ ಕೋಪೋದ್ರಿಕ್ತ ಜನರ ಗುಂಪೊಂದು ಕುಮಟೂರಿನ ಇವರ ಮನೆಯನ್ನು ಸುಟ್ಟುಹಾಕಿತ್ತು. ೧೯೯೩ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
೧೯೮೫ರಲ್ಲಿ ಸಿಎಂ ಚಿನ್ನದ ಪದಕದ ಗೌರವಕ್ಕೆ ಪಾತ್ರರಾಗಿದ್ದ ಚಿಣ್ಣಪ್ಪ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪರಿಸರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ಅಧ್ಯಕ್ಷರಾಗಿ ಇವರು ನಡೆಸಿದ ಹೋರಾಟಗಳು ಇಂದಿಗೂ ಪರಿಸರ ವಿರೋಧಿಗಳಿಗೆ ಒಂದು ಪಾಠವಾಗಿದೆ. ಶಾಲಾ - ಕಾಲೇಜುಗಳಿಹೆ ತೆರಳಿ ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಿತರಾಗಿ ಕಾಡಿನ ಸಂರಕ್ಷಣೆಯ ಕುರಿತು ತರಬೇತಿ ನೀಡುತ್ತಿದ್ದರು. ಕಾಳ್ಗಿಚ್ಚು ಅರಿವು ಜಾಥಾಗಳಲ್ಲೂ ಪಾಲ್ಗೊಂಡು ಅರಿವು ಮೂಡಿಸುತ್ತಿದ್ದರು. ಕಾಡಿನೊಳಗೊಂದು ಜೀವ ಚಿಣ್ಣಪ್ಪ ಅವರ ಆತ್ಮಕಥನ