ಶ್ರೀನಿವಾಸಪುರ: ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖ ಬೆಳೆಯಾದ ಮಾವಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವಲ್ಲಿ ಮಾವು ಅಭಿವೃದ್ಧಿ ಮಂಡಳಿ ವಿಫಲವಾಗಿದೆ. ಇದಕ್ಕೆ ಶಕ್ತಿ ತುಂಬಿ ಬೆಳೆಗಾರರ ಹಿತ ಕಾಯುವ ಕೆಲಸ ಮಾಡಲಾಗುವುದು ಎಂದು ತೋಟಗಾರಿಕೆ, ಪೌರಾಡಳಿತ ಹಾಗೂ ರೇಷ್ಮೆಖಾತೆ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ತಾಲೂಕಿನ ಹೊಗಳಗೆರೆಯ ಮಾವು ಅಭಿವೃದ್ಧಿ ಮತ್ತು ಸಂಶೋದನಾ ಕೇಂದ್ರದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿ, ಮಂಡಳಿ ಸ್ಥಾಪನೆಗೊಂಡಾಗಿನಿಂದ ಸರ್ಕಾರದಿಂದ ಪಡೆದಿರುವ ಅನುದಾನವೆಷ್ಟು, ಎಷ್ಟು ರೈತರಿಗೆ ಅನುಕೂಲವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜೆ.ನಾಗರಾಜ್ ಅವರನ್ನು ಪ್ರಶ್ನಿಸಿದರು.
ಸಮರ್ಪಕ ಉತ್ತರ ನೀಡದ ಅಧಿಕಾರಿ ವಿರುದ್ಧ ಗರಂ ಆದ ಸಚಿವರು, ಅಭಿವೃದ್ಧಿ ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಲೆಕ್ಕ ಬರೆಯಲು ಮತ್ತು ಸಂಬಳ ಪಡೆಯಲು ಮಾತ್ರ ಸೀಮಿತರಾಗಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಎಲ್ಲ ಸೌಲಭ್ಯ ಪಡೆಯುತ್ತಿರುವ ಅಧಿಕಾರಿಗಳು ರೈತರ ನೆರವಿಗೆ ಬರಲು ಯಾಕೆ ಸಾಧ್ಯವಾಗುತ್ತಿಲ್ಲ. ರೈತರ ಅನುಕೂಲಕ್ಕಾಗಿ ಸ್ಥಾಪಿಸಿರುವ ಮಂಡಳಿ ಸ್ವಂತ ಆಸ್ತಿ ಎಂದು ಭಾವಿಸಿ ಮನಸ್ಸಿಗೆ ಬಂದ ಹಾಗೆ ವರ್ತನೆ ಮಾಡುತ್ತಿದ್ದಾರೆ. ರಾಮನಗರದಲ್ಲಿ ಖಾಸಗಿ ಒಡೆತನದ ಸಂಸ್ಥೆಗೆ ಮಾವು ಮಾರಾಟ ಮಾಡಲು ಅವಕಾಶ ಕಲ್ಪಿಸಿ ರೈತರಿಗೆ ನಷ್ಟ ಉಂಟಾಗುತ್ತಿದೆ. ಈ ಎಲ್ಲವನ್ನು ಸರಿಪಡಿಸಲು ಮಂಡಳಿಗೆ ಶಕ್ತಿ ತುಂಬಬೇಕಿದೆ ಮತ್ತು ರೈತರು ಮಾವು ಮಾರಾಟ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಸತತ ಹೋರಾಟದಿಂದ 2017ರಲ್ಲಿ ಮಾವು ಮಂಡಳಿ ಸ್ಥಾಪನೆ ಮಾಡಿಸಲಾಯಿತು. ಆದರೆ ಅಧಿಕಾರಿಗಳ ಲೋಪದಿಂದ ಬೆರಳೆಣಿಕೆಯಷ್ಟು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಭಾಗದ ತೋಟಗಾರಿಕಾ ಬೆಳೆಗಳಿಗೆ ಶೇ.100 ಸಬ್ಸಿಡಿ ನೀಡಬೇಕು ಮತ್ತು ಮಂಡಳಿಗೆ ವಾರ್ಷಿಕ 25 ಕೋಟಿ ರೂ. ಅನುದಾನ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್, ಮಾವು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜೆ.ನಾಗರಾಜ್, ಉಪ ನಿರ್ದೇಶಕಿ ಗಾಯತ್ರಿ, ತಹಸೀಲ್ದಾರ್ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಮೋಹನ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್‌ಗೌಡ ಇತರರು ಇದ್ದರು.
ಮಹಾರಾಷ್ಟ್ರಕ್ಕೆ ನಿಯೋಗ: ಮಹಾರಾಷ್ಟ್ರಕ್ಕೆ ಈ ಭಾಗದ ರೈತರು ಸೇರಿ ಹಲವು ಶಾಸಕರು, ಸಚಿವರು ಜತೆಗೂಡಿ ನಿಯೋಗ ತೆರಳಿ ಮಾವು ಬೆಳೆ ಮತ್ತು ಮಾರಾಟದ ಬಗ್ಗೆ ಅಧ್ಯಯನ ಮಾಡಬೇಕಿದೆ. ಇತರ ರಾಜ್ಯಗಳ ಮಾವು ರಫ್ತಿಗಿಂತ ನಮ್ಮ ಭಾಗದ ಮಾವು ರಫ್ತಿಗೆ ಅವಕಾಶ ಕಲ್ಪಿಸಿಕೊಡಬೇಕಿದೆ. ಇದಕ್ಕೆ ಅಧಿಕಾರಿಗಳು ಬದ್ಧತೆ ತೋರಬೇಕು ಎಂದು ನಾರಾಯಣಗೌಡ ಹೇಳಿದರು.
ರೈತರು ಹಣ ತಂದುಕೊಡಬೇಕೇ?: ರೇಷ್ಮೆ ಗೂಡು ಪ್ರೋತ್ಸಾಹಧನ ಪಾವತಿಗೆ ರೈತರು ಹಣ ತಂದುಕೊಡಬೇಕಿತ್ತೇ? ಬನ್ನಿ ನಾವೇ ಕೊಡ್ತೀವಿ ಎಂದು ನಾರಾಯಣಗೌಡ ರೇಷ್ಮೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈತರಿಂದ ವ್ಯಕ್ತವಾದ ದೂರಿಗೆ ಗರಂ ಆದ ಸಚಿವರು, ಎಷ್ಟೋ ಅಧಿಕಾರಿಗಳು ರೈತರನ್ನು ಹಾಳು ಮಾಡುತ್ತಿದ್ದೀರಿ, ಹಣ ಕೊಡುವವರೆಗೆ ಖಾತೆಗೆ ಹಣ ಹಾಕಿಲ್ಲ. ಆ ರೀತಿ ಒಂದೇ ಒಂದು ಲಿಖಿತ ದೂರು ಬಂದರೂ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ನಿರ್ದೇಶಕ ಆಂಜನೇಯಗೌಡರಿಗೆ ಎಚ್ಚರಿಕೆ ನೀಡಿದರು.
ರೈತರಿಂದ ದಾಖಲೆ ಪಡೆಯುತ್ತಿರುವ ಬಗ್ಗೆ ಅಧಿಕಾರಿ ಸಮಜಾಯಿಷಿ ನೀಡುತ್ತಿದ್ದಂತೆ ಸಿಡಿಮಿಡಿಗೊಂಡ ಸಚಿವರು, ಎಲ್ಲ ಜಿಲ್ಲೆಯಲ್ಲೂ ರೈತರ ಖಾತೆಗೆ ಹಣ ಪಾವತಿಯಾಗಿದೆ. ನಿಮಗೇನು ಸ್ಪೆಷಲ್? ಮನೆಯಲ್ಲಿ ಮಲಗಿದ್ರಾ ನೀವು. ನಾಲ್ಕೈದು ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರಲ್ಲದೆ ಇಂತಹ ಅಧಿಕಾರಿಗಳನ್ನು ನೀವು ಇಟ್ಟುಕೊಂಡಿದ್ದೀರಲ್ಲ ಎಂದು ಪಕ್ಕದಲ್ಲಿದ್ದ ಎಮ್ಮೆಲ್ಸಿ ನಾರಾಯಣಸ್ವಾಮಿಗೆ ಚುಚ್ಚಿದರು.