ಜಿಲ್ಲೆ

ಪದ್ಮನಾಭನಗರ, ಜೆಪಿ ನಗರ ಮನೆಗಳ ಕುಮ್ಮಕ್ಕಿನ ಬಗ್ಗೆ ಗೊತ್ತಿಲ್ಲ: ನಾರಾಯಣಗೌಡ

ಬೆಂಗಳೂರು: ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ಮಹಾರಾಷ್ಟ್ರದಲ್ಲಿ ಎಲ್ಲವನ್ನು ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದೇನೆ. ಯಾವುದಕ್ಕೂ ಹೆದರುವ ಜಾಯಮಾನ ನನ್ನದಲ್ಲ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿದ್ದಾರೆ.

‘‘ಮಂಡ್ಯ ಜಿಲ್ಲೆಯ ಎಲ್ಲ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಬೇಕಿದ್ದರೆ ಮೊಬೈಲ್ ಕಾಲ್ ವಿವರ ತೋರಿಸಲು ಸಿದ್ಧ. ಅವರು ಏಕೆ ಮಾಧ್ಯಮಗಳ ಮುಂದೆ ನನ್ನನ್ನು ಬೈಯುತ್ತಾರೋ ಗೊತ್ತಿಲ್ಲ’’ ಎಂದರು.

‘ಪದ್ಮನಾಭನಗರ’ ಅಥವಾ ‘ಜೆಪಿ ನಗರ ಮನೆ’ಗಳ ಸೂಚನೆಯಂತೆ ಹೀಗೆ ಮಾತನಾಡುತ್ತಿರಬಹುದೇ ಎಂಬುದು ನನಗೆ ಗೊತ್ತಿಲ್ಲ. ವಿಷಯ ಗೊತ್ತಿಲ್ಲದೆ ದೊಡ್ಡವರ ಬಗ್ಗೆ ಮಾತನಾಡುವುದು ಸರಿಯಲ್ಲ’’ ಎಂದು ಎಚ್‌ಡಿ ದೇವೇಗೌಡ ಮತ್ತು ಎಚ್‌ಡಿ ಕುಮಾರಸ್ವಾಮಿಯವರ ಕುರಿತು ತಮ್ಮ ನಿಲುವು ವ್ಯಕ್ತಪಡಿಸಿದರು.

‘‘ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿ.ಡಿ. ವಿಚಾರ ಏನೂ ಹೇಳಿಲ್ಲ. ಅವರ‌್ಯಾಕೆ ಹಾಗೆ ಮಾತಾಡಿದರೋ ನನಗೆ ಗೊತ್ತಿಲ್ಲ. ನನಗೆ ಕೆಲಸ ಮಾಡೋದಷ್ಟೆ ಗೊತ್ತು, ನನಗೆ ಯಾವುದೇ ಭಯ ಇಲ್ಲ’’ ಎಂದು ಹೇಳಿದರು.

‘‘ನಾನು ಶಾಸಕ ಸುರೇಶ್ ಗೌಡ ಅವರ ಸಿ.ಡಿ. ಬಿಡುಗಡೆ ಮಾಡುತ್ತೇನೆ, ಸಿಡಿ ಇದೆ ಎಂಬ ವಿಚಾರ ಹೇಳಿಯೇ ಇಲ್ಲ. ಸಿಡಿ ಮಾಡೋದು, ಮಾಡಿಸೋದು ನನ್ನ ಸ್ವಭಾವ ಅಲ್ಲ. ಯಾವತ್ತೂ ಅಂತ ಕೆಲಸ ಮಾಡೋದಿಲ್ಲ. ನಾವೆಲ್ಲರೂ ಒಂದೇ ಪಕ್ಷದಲ್ಲಿ ಇದ್ದವರು. ಸ್ನೇಹಿತರು’’ ಎಂದರು.