ಮಂಗಳೂರು : ಅಯೋಧ್ಯೆಯಲ್ಲಿ 1992ರಲ್ಲಿ ನಡೆದ ಕರಸೇವೆಯಲ್ಲಿ ಭಾಗವಹಿಸಲು ತೆರಳ ಬೇಕಾಗಿದ್ದ ಪೇಜಾವರ ಮಠದ ಆಗಿನ ಹಿರಿಯ ಸ್ವಾಮೀಜಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ವಾಹನದ ವ್ಯವಸ್ಥೆ ಇರಲಿಲ್ಲ. ಬೆಂಗಳೂರಿನಲ್ಲಿ ಉಪವಾಸ ಪ್ರಾರಂಭ ಮಾಡಿದ ಸ್ವಾಮೀಜಿಯವರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮಂಗಳೂರಿನ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಯ್ಕ ಅವರನ್ನು ವಿನಂತಿಸಿದ್ದರು. ರಾಮ ಜನ್ಮಭೂಮಿ ಹೋರಾಟದಲ್ಲಿ ತನ್ನ ಅಳಿಲ ಸೇವೆಯೆಂದು ಭಾವಿಸಿದ ಕೆ.ಸಿ.ನಾಯ್ಕ ಅವರು ತಮ್ಮ ಮಾಲಕತ್ವದ ಮಹಾಬಲೇಶ್ವರ ಬಸ್‌ನ ವ್ಯವಸ್ಥೆ ಕಲ್ಪಿಸಿದ್ದರು. ಬೆಂಗಳೂರಿನಿಂದ ಅಯೋಧ್ಯೆಗೆ ಪೇಜಾವರ ಶ್ರೀಗಳು ಹಾಗೂ ಇತರ ಪ್ರಮುಖರು ತೆರಳಿ ಕರಸೇವೆ ಪೂರೈಸಿ ಮರಳಿದ್ದರು.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿರುವ ಈ ಸಂದರ್ಭ ಕೆ.ಸಿ.ನಾಯ್ಕ ಅವರು ಹಿಂದಿನ
ಘಟನೆಯನ್ನು ಸ್ಮರಿಸಿ ಇದು ನನ್ನ ಸೌಭಾಗ್ಯ. ಜ.22ರಂದು ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ವಿವಿಧ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 6ರಿಂದ ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಭಜನಾ ನಾಮ ಸಂಕೀರ್ತನೆ 8ಕ್ಕೆ ಮಹಾಪೂಜೆ, 10ರಿಂದ ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ನೇರಪ್ರಸಾರ , 12.30ರಿಂದ ಗೋಪಾಲಕೃಷ್ಣ ದೇವರಿಗೆ ಸಹಸ್ರ ತುಳಸಿ ಅರ್ಚನೆ, ವಿಶೇಷ ಕಾರ್ತಿಕ ಪೂಜೆ, ಮಹಾಪೂಜೆ, ಪಾನಕ ಪ್ರಸಾದ ವಿತರಣೆ. ಸಾಯಂಕಲ 6:25ಕ್ಕೆ ಉತ್ತರ ದಿಕ್ಕಿನಲ್ಲಿರುವ ಅಯೋಧ್ಯೆ ಶ್ರೀರಾಮನಿಗೆ ಮಂಗಳಾರತಿ, ರಾತ್ರಿ8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಶ್ರೀ ರಾಮ ದೀಪೋತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮೊಕ್ತೇಸರ ಡಾ.ಕೆ.ಸಿ.ನಾಯ್ಕ ತಿಳಿಸಿದ್ದಾರೆ.