ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಬಾಟಿಕ್ ತಂತ್ರಜ್ಞಾನ ಅಳವಡಿಸುವ ಮೂಲಕ ಖಾಸಗಿ ಆಸ್ಪತ್ರೆಗಳಂತೆ ಅತ್ಯಾಧುನಿಕ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲೂ ದೊರೆಯುವಂತೆ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಆರೋಗ್ಯ ಇಲಾಖೆಯು ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ರೋಬೊಟಿಕ್ ತಂತ್ರಜ್ಞಾನ ಬಳಸಿಕೊಂಡು ಶಸಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸುವ ಅಗತ್ಯವಿದೆ. ಇದಕ್ಕಾಗಿ ರೋಬಾಟಿಕ್ ಯಂತ್ರಗಳ ನಿರ್ವಹಣೆ ಕುರಿತು ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ತರಬೇತಿ ಒದಗಿಸಬೇಕಿದೆ. ಖಾಸಗಿಯಲ್ಲಿ ತಂತ್ರಜ್ಞಾನ ಆಧಾರಿತ ಚಿಕಿತ್ಸೆಗಳು ಬಹಳ ದುಬಾರಿಯಾಗಿದ್ದು, ಈ ಮೊತ್ತ ಪಾವತಿಸಲಾಗದೆ ನಿತ್ಯ ನೂರಾರು ಮಂದಿ ಪರಿಹಾರ ಕೇಳಿಕೊಂಡು ಬರುತ್ತಾರೆ. ಆದರೆ ಈ ಎಲ್ಲ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದೊರೆಯುವಂತಾದರೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತವಾಗಿಯೇ ಗುಣಮಟ್ಟದ ಹಾಗೂ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಿಗೆ ರಾಜಕಾರಣಿಗಳು ಹೋಗಲ್ಲ: ನಾನು ಸೇರಿ ಮಂತ್ರಿಗಳು, ರಾಜಕಾರಣಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಇದರಿಂದಾಗಿ ಅಲ್ಲಿನ ವ್ಯವಸ್ಥೆ ಅರಿವಿಗೆ ಬರುವುದಿಲ್ಲ. ಇದರಲ್ಲಿ ನಮ್ಮ ತಪ್ಪೂ ಇದೆ. ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಗುಣಮಟ್ಟದ ಸೇವೆ ಹಾಗೂ ಶುಚಿತ್ವ ಸರ್ಕಾರಿ ಆಸ್ಪತ್ರೆಗಳು ದೊರೆಯುವಂತೆ ಕ್ರಮವಹಿಸಲು ಸರ್ಕಾರ ಅಗತ್ಯ ಅನುದಾನ ನೀಡುತ್ತಲೇ ಇದೆ. ಆಸ್ಪತ್ರೆಗಳ ಆಡಳಿತ ಮಂಡಳಿ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಅದನ್ನು ಬಳಸಿಕೊಂಡು ಜನರಿಗೆ ಸೌಲಭ್ಯ ಒದಗಿಸಬೇಕು. ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ಹೇಳಿದರು.
ಜಯದೇವ ಘಟಕದಲ್ಲಿ 24 ಗಂಟೆ ಸೇವೆ: ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚುತ್ತಿದ್ದು, ರೋಗಿಗಳಿಗೆ ಸಕಾಲದಲ್ಲಿ ಆಂಜಿಯೋಗ್ರಾಮ್ ಹಾಗೂ ಆಂಜಿಯೋಪ್ಲಾಸ್ಟಿ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸದ್ಯ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿರುವ ಸಂಜೆ 5 ಗಂಟೆವರೆಗೆ ಮಾತ್ರವೇ ಕಾರ್ಯನಿರ್ವಹಿಸುತ್ತಿರುವ ಜಯದೇವ ಹೃದ್ರೋಗ ಸಂಸ್ಥೆಯ ಘಟಕದಲ್ಲಿ 24 ಗಂಟೆಗಳ ಸೇವೆ ಒದಗಿಸುವಂತೆ ಸಂಸ್ಥೆ ನಿರ್ದೇಶಕರಿಗೆ ಸೂಚಿಸಿದ್ದೇನೆ. ಇದಕ್ಕಾಗಿ ಅಗತ್ಯ ಸಿಬ್ಬಂದಿ ಮತ್ತು ಹಣ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಬಿಎಂಪಿ ಆಸ್ಪತ್ರೆಗಳ ನಿರ್ವಹಣೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರು ನಗರದಲ್ಲಿ ಅನೇಕ ಆಸ್ಪತ್ರೆಗಳು ನಿರ್ಮಾಣಗೊಳ್ಳುತ್ತಿದ್ದು, ಎಲ್ಲವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಆಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಜತೆ ಚರ್ಚಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಆಸ್ಪತ್ರೆಗಳನ್ನು ಇಟ್ಟುಕೊಂಡು ಉಳಿದ ಆಸ್ಪತ್ರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ನೀಡುವ ಆಲೋಚನೆ ಹೊಂದಿರುವುದಾಗಿ ಹೇಳಿದರು.
ಡೇ ಕೇರ್ ಸೆಂಟರ್: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಕ್ರಮವಹಿಸಲಾಗಿದೆ. ಕಿಮೋಥೆರಪಿಗೆ ಸಂಬಂಧಿಸಿದಂತೆ ದೊಡ್ಡ ಆಸ್ಪತ್ರೆಗಳಿಗೆ ತೆರಳುವುದನ್ನು ತಪ್ಪಿಸಲು ಮುಂದಿನ ತಿಂಗಳಿಂದ ಜಿಲ್ಲಾ ಆಸ್ಪತ್ರೆಗಳಲ್ಲಿಯೇ ಕಿಮೋಥೆರಪಿ ಡೇ ಕೇರ್ ಸೆಂಟರ್ ಪ್ರಾರಂಭಿಸಲಾಗುವುದು. ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಪ್ರತ್ಯೇಕ ಆಂಬುಲೆನ್ಸ್ ಸೇವೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಈ ಸಂಬಂಧ ಅಪಘಾತ ವಲಯವನ್ನು (ಹಾಟ್ ಸ್ಪಾಟ್) ಗುರುತಿಸಿ, ಹತ್ತಿರದಲ್ಲಿಯೇ ಟ್ರಾಮಾ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಭೂಮಿ ಪೂಜೆ ನೆರವೇರಿಸಲಾದ ಯೋಜನೆಗಳ ವಿವರ:
*ಕೆ.ಸಿ. ಜನರಲ್ ಆಸ್ಪತ್ರೆಯ ಆವರಣದಲ್ಲಿ ಒಟ್ಟು 12,824 ಚದರ ಮೀಟರ್ ವಿಸ್ತೀರ್ಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಲಿದ್ದು, ಕಟ್ಟಡದ ಅಡಿಪಾಯದ ವಿಸ್ತೀರ್ಣ 2,131 ಚದರ ಮೀಟರ್ ಇರಲಿದೆ. ಇದಕ್ಕೆ 66.78 ಕೋಟಿ ವೆಚ್ಚವಾಗಲಿದೆ. ನಾಲ್ಕು ಮಹಡಿಯ ಈ ಆಸ್ಪತ್ರೆಯು, 200 ಹಾಸಿಗೆಗಳನ್ನು ಒಳಗೊಂಡಿರಲಿದೆ.
* ಒಟ್ಟು 8,810 ಚದರ ಮೀಟರ್ ವಿಸ್ತೀರ್ಣದಲ್ಲಿ 38.28 ಕೋಟಿ ವೆಚ್ಚದಲ್ಲಿ ಭೋದಕ ವಿಭಾಗದ ಕಟ್ಟಡ ನಿರ್ಮಾಣ. ಈ ಕಟ್ಟಡ ಐದು ಮಹಡಿಗಳನ್ನು ಹೊಂದಿರಲಿದೆ.
* ಒಟ್ಟು 790 ಚದರ ಮೀಟರ್ ವಿಸ್ತೀರ್ಣದಲ್ಲಿ 4.28 ಕೋಟಿ ವೆಚ್ಚದಲ್ಲಿ ಶವಾಗಾರ ಕೊಠಡಿ ನಿರ್ಮಾಣ.
* ಒಟ್ಟು 230 ಚದರ ಮೀಟರ್ ವಿಸ್ತೀರ್ಣದಲ್ಲಿ 1.77 ಕೋಟಿ ವೆಚ್ಚದಲ್ಲಿ ಅಡುಗೆ ಮನೆ ಕಟ್ಟಡ ನಿರ್ಮಾಣ.
* 190 ಚದರ ಮೀಟರ್ ವಿಸ್ತೀರ್ಣದಲ್ಲಿ 1.98 ಕೋಟಿ ವೆಚ್ಚದಲ್ಲಿ ಲಾಂಡ್ರಿ ಕಟ್ಟಡ ನಿರ್ಮಾಣ.
* 135 ಚದರ ಮೀಟರ್ ವಿಸ್ತೀರ್ಣದಲ್ಲಿ 38 ಲಕ್ಷ ವೆಚ್ಚದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯದ ಕೊಠಡಿ ನಿರ್ಮಾಣ.