ಜಿಲ್ಲೆ

ಗೋಪಾಲಯ್ಯರ ವಿಜಯೋತ್ಸವದಂತೆ ಕಾಣುತ್ತಿದೆ: ಕೆ. ಅಣ್ಣಾಮಲೈ ಹೇಳಿಕೆ

ಮಹಾಲಕ್ಷ್ಮೀ ಲೇಔಟ್: ಕ್ಷೇತ್ರದಲ್ಲಿ ಇಂದು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ನೋಡಿದರೆ, ಇದು ರೋಡ್ ಶೋ ಅಲ್ಲ. ಗೋಪಾಲಯ್ಯ ಅವರ ವಿಜಯೋತ್ಸವದಂತೆ ಕಾಣುತ್ತಿದೆ ಎಂದು ರಾಜ್ಯ ಬಿಜೆಪಿ ಸಹ ಪ್ರಭಾರಿ ಕೆ. ಅಣ್ಣಾಮಲೈ ಹೇಳಿದ್ದಾರೆ.

ಡಾ. ರಾಜಕುಮಾರ್ ಪ್ರತಿಮೆ ಬಳಿಯಿಂದ ಜೆ.ಸಿ. ನಗರ, ಕುರುಬರಹಳ್ಳಿ ಸರ್ಕಲ್ ಮಾರ್ಗವಾಗಿ ಸತ್ಯನಾರಾಯಣ ಚೌಟ್ರಿ ಸರ್ಕಲ್​ವರೆಗೆ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಹಮ್ಮಿಕೊಂಡಿದ್ದ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡು ಬೆಂಬಲ ನೀಡುತ್ತಿರುವುದು ಸಂತಸದ ವಿಷಯ. ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕ್ಷೇತ್ರದ ಜನತೆ ಗೋಪಾಲಯ್ಯನವರಿಗೆ ಹೆಚ್ಚಿನ ಮತ ನೀಡಿ ಅವರನ್ನು ವಿಜಯಶಾಲಿಯನ್ನಾಗಿ ಮಾಡಬೇಕು ಎಂದರು.

ಗೋಪಾಲಯ್ಯ ಮಾತನಾಡಿ, ಕ್ಷೇತ್ರದಲ್ಲಿ ಇಲ್ಲಿಯವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಕರೊನಾ ಸಂದರ್ಭ ಪಟ್ಟ ಶ್ರಮದ ಅರಿವು ಜನತೆಗಿದೆ. ಸಾರ್ವಜನಿಕರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬಹುಮತದಿಂದ ಗೆಲ್ಲಿಸಿ, ನಿಮ್ಮ ಸೇವೆಗೆ ಶ್ರಮಿಸಲು ಸಹಕರಿಸಿ ಎಂದು ಕೋರಿದರು.

ಮಾಜಿ ಉಪಮೇಯರ್ ಎಸ್. ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶಿವಾನಂದಮೂರ್ತಿ ನಾಗರಾಜ್ ಇದ್ದರು.