ಜಿಲ್ಲೆ

ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಲಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಆರ್ಥಿಕ ಬದಲಾವಣೆಗಳನ್ನು ತರುವ ಮತ್ತು ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವ ಮಹಿಳಾ ಮಾಲೀಕತ್ವದ ಉದ್ಯಮಗಳು ಸಮಾಜದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ಸಮಾಜ ಸೇವಕಿ ಜ್ಯೋತಿ ಪ್ರಲ್ಹಾದ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪ್ರಸ್ತಾವನೆಯ ಮೇರೆಗೆ ಗ್ರಾಮ ವಿಕಾಸ ಸೊಸೈಟಿ ಅನುಷ್ಠಾನಗೊಳಿಸುತ್ತಿರುವ ಉಚಿತ ವೃತ್ತಿಪರ ತರಬೇತಿ ಮೂಲಕ ವಿವಿಧ ಕಂಪನಿಗಳ ಸಹಯೋಗದೊಂದಿಗೆ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿರುದ್ಯೋಗಿ ಮಹಿಳೆಯರು ತಾವು ಪಡೆದ ಸ್ವ ಉದ್ಯೋಗದ ತರಬೇತಿಯನ್ನು ವೃತ್ತಿಗೆ ಪೂರಕವಾಗಿ ಬಳಸಿಕೊಂಡಾಗ ತರಬೇತಿ ಪಡೆದದ್ದಕ್ಕೂ ಸಾರ್ಥಕವಾಗುತ್ತದೆ. ಉದ್ಯಮ ಕ್ಷೇತ್ರದಲ್ಲಿ ಉದ್ಯಮಿಗಳಾಗಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಗಮನಾರ್ಹ ವ್ಯವಹಾರ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಸಮಯ ಕಳೆಯಲು ತರಬೇತಿ ಪಡೆಯದೆ, ಬದುಕಿನ ಉನ್ನತಿಗೆ ಪೂರಕವಾಗಿ ಅದನ್ನು ಬಳಸಿಕೊಳ್ಳಬೇಕು. ಆ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು.

ಗ್ರಾಮ ವಿಕಾಸ ಸೊಸೈಟಿ ಸಿಇಒ ಜಗದೀಶ ನಾಯಕ ಮಾತನಾಡಿ, ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಇದುವರೆಗೆ 4,032 ಮಹಿಳೆಯರಿಗೆ ತರಬೇತಿ ನೀಡಿದ್ದು, ಅದರಲ್ಲಿ 995 ಮಹಿಳೆಯರಿಗೆ ಜಾಬ್ ಆಫರ್ ನೀಡಲಾಗಿದೆ. ಈ ತರಬೇತಿಯಲ್ಲಿ ಮಹಿಳೆಯರು ತಯಾರಿಸಿದ ಸಿದ್ದ ಉಡುಪಗಳನ್ನು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರ ಯಡ್ರಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ನಾಯಕ ಪರಿಚಯಿಸಿದರು. ಸಚಿನ್ ಸ್ವಾಗತಿಸಿದರು. ಅಸ್ಮಿತಾ ಕರಕಣ್ಣವರ ನಿರೂಪಿಸಿದರು. ರಂಜಿತಾ ವಂದಿಸಿದರು.

ಗ್ರಾಪಂ ಅಧ್ಯಕ್ಷೆ ಮಹಾದೇವಿ ಬಸಪ್ಪ ಹಂಗರಕಿ, ಮಧು ಕಲ್ಲಪ್ಪ ಹುಬ್ಬಳ್ಳಿ, ಶಿವಾನಂದ ನವಲೂರ, ಜೀವನಮುಕ್ತ ಬೈಲಮ್ಮನವರ, ಜಗದೀಶ ರೂಗಿ, ಸಂತೋಷ ಜೀವಣ್ಣವರ, ಸಿದ್ದು ರೂಗಿ, ಮಂಜು ಬೆಂಗೇರಿ, ಹನುಮಂತಗೌಡ ಗಿರಿಯಪ್ಪಗೌಡ್ರ, ಮತ್ತಿತರರು ಉಪಸ್ಥಿತರಿದ್ದರು.