ಜಿಲ್ಲೆ

ಮಂಗಳೂರು ಜುವೆಲ್ಲರಿ ಕೊಲೆ ಪ್ರಕರಣ ಆರೋಪಿ ಪತ್ತೆಗೆ ಕ್ಲೂ ನೀಡಿದ ಬ್ಯಾಗ್

reportermng

ಮಂಗಳೂರು: ನಗರದ ಜುವೆಲರಿ ಅಂಗಡಿಗೆ ನುಗ್ಗಿ ಸೇಲ್ಸ್‌ಮ್ಯಾನ್‌ನ್ನು ಹತ್ಯೆಗೈದಿದ್ದ ಆರೋಪಿ ಶಿಫಾಸ್ ಮಂಗಳೂರು ಮಾತ್ರವಲ್ಲದೆ ತಮಿಳುನಾಡು, ಕೇರಳ, ಗೋವಾದಲ್ಲಿಯೂ ಇದೇ ರೀತಿಯ ಕೃತ್ಯ ನಡೆಸುವ ಉದ್ದೇಶದಿಂದ ಓಡಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಇಲ್ಲಿ ನಡೆದಿರುವ ಕೃತ್ಯದ ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲಿ ನಡೆದಿದ್ದರೆ ಅದರ ಮಾಹಿತಿ ನೀಡುವಂತೆ ಅಲ್ಲಿನ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಆರೋಪಿಯ ಪತ್ತೆ ಸವಾಲಾಗಿತ್ತು. ಆತನ ಮುಖಚರ್ಯೆ ಸ್ಪಷ್ಟವಾಗಿ ಯಾವುದೇ ಸಿಸಿ ಕೆಮರಾದಲ್ಲಿ ದಾಖಲಾಗಿರಲಿಲ್ಲ. ಹಾಗಾಗಿ ಆತನ ಚಹರೆ, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಚಿತ್ರಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಇದನ್ನು ಗಮನಿಸಿದ ಕಾಸರಗೋಡಿನ ಪೊಲೀಸರು ಓರ್ವ ಶಂಕಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ಮಾಹಿತಿ ನೀಡಿದ್ದರು. ಆತ ಧರಿಸಿದ್ದ ಬ್ಯಾಗ್‌ನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದರು. ಬಳಿಕ ಮಂಗಳೂರು ಪೊಲೀಸರು ವಿಚಾರಿಸಿದಾಗ ಆತನೇ ಆರೋಪಿ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.

  • ರಕ್ತದ ಕಲೆಗೆ 3-4 ಬಟ್ಟೆ: ಚೂರಿಯಿಂದ ಇರಿದ ಅನಂತರ ತನ್ನ ಬಟ್ಟೆ ಮೇಲೆ ರಕ್ತ ಚೆಲ್ಲುವುದರಿಂದ ಬಟ್ಟೆಯನ್ನು ಎಲ್ಲಿಯಾದರೂ ಬಿಸಾಡಿ ಹೋಗುವುದು ಆರೋಪಿಯ ಯೋಚನೆಯಾಗಿತ್ತು. ಅದಕ್ಕಾಗಿ 3-4 ಬಟ್ಟೆಗಳನ್ನು ಒಂದರ ಮೇಲೆ ಒಂದರಂತೆ ಧರಿಸುತ್ತಿದ್ದ. ಕಾಸರಗೋಡಿನಲ್ಲಿ ವಶಕ್ಕೆ ಪಡೆಯುವಾಗಲೂ ಅದೇ ರೀತಿ ಬಟ್ಟೆ ಧರಿಸಿದ್ದ. ಆತ ಕಾಸರಗೋಡಿನಲ್ಲಿ ಅಂತಹುದೇ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದುದು ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
    ಜುವೆಲರಿ ಅಂಗಡಿಯ ಸೇಲ್ಸ್‌ಮ್ಯಾನ್ ರಾಘವೇಂದ್ರ ಆಚಾರ್ಯ ಅವರು ಜುವೆಲರಿ ಅಂಗಡಿಯಲ್ಲಿ ಒಳಗಿನ ಕೋಣೆಗೆ ಹೋದಾಗ ಆರೋಪಿ ಶಿಫಾಸ್ ಅವರನ್ನು ಹಿಂಬಾಲಿಸಿ ಅವರೊಂದಿಗೆ ಸಂಘರ್ಷ ನಡೆಸಿ ಚೂರಿಯಲ್ಲಿ ಇರಿದಿದ್ದ. ಕೃತ್ಯ ನಡೆಸಿ ಸ್ವಲ್ಪ ದೂರದವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಆಟೋದಲ್ಲಿ ಹೆದ್ದಾರಿ ಕಡೆಗೆ ತೆರಳಿದ್ದ. ಆರೋಪಿ ಭಾರೀ ದರೋಡೆ ಮಾಡುವ ಇರಾದೆ ಹೊಂದಿದ್ದ. ಆತ ಚೂರಿಯಿಂದ ಇರಿದ ಕೂಡಲೇ ಅಂಗಡಿ ಮಾಲೀಕರು ಅಂಗಡಿಗೆ ಬಂದಿದ್ದರು. ಆಗ ಪರಾರಿಯಾಗಿದ್ದ. ಅಂಗಡಿಯಿಂದ ಕೆಲವು ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯಲ್ಲಿ ವಿಚಾರಿಸುವಾಗ ಸಮರ್ಪಕ ಉತ್ತರ ನೀಡಿಲ್ಲ. ಈ ಬಗ್ಗೆ ವಿಚಾರಣೆ, ಪರಿಶೀಲನೆ ಮುಂದುವರೆಸಲಾಗುವುದು ಎಂದು ತಿಳಿಸಿದರು.
  • ಅಂಗಡಿ ಮಾಲೀಕರಿಗೆ ಸೂಚನೆ
    ಜುವೆಲರಿ ಅಂಗಡಿಯವರು ಸಿಸಿ ಕೆಮರಾಗಳನ್ನು ಅಳವಡಿಸಬೇಕು. ಒಂದಕ್ಕಿಂತ ಹೆಚ್ಚು ಮಂದಿ ಸಿಬಂದಿಯನ್ನು ನಿಯೋಜಿಸಬೇಕು. ಸಿಬಂದಿಯ ಹಿನ್ನೆಲೆಯನ್ನು ಕೂಡ ಸರಿಯಾಗಿ ಪರಿಶೀಲಿಸಿ ನಿಯೋಜಿಸಬೇಕು ಎಂದು ಪೊಲೀಸ್ ಆಯುಕ್ತರು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
  • ಪೊಲೀಸರಿಗೆ ಅಭಿನಂದನೆ
    ಕಾರ್ಯಾಚರಣೆಯಲ್ಲಿ ಮಂಗಳೂರಿನ ಡಿಸಿಪಿ ಅಂಶುಕುಮಾರ್ ಅವರ ನೇತೃತ್ವದ 8 ಪೊಲೀಸ್ ತಂಡ ಹಾಗೂ ಕಾಸರಗೋಡು ಡಿವೈಎಸ್‌ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡ ಪಾಲ್ಗೊಂಡಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಕೇರಳ ಪೊಲೀಸ್ ತಂಡವನ್ನು ಆಯುಕ್ತರು ಗೌರವಿಸಿದರು. ಕರ್ನಾಟಕ ಪೊಲೀಸರಿಗೆ 25 ಸಾವಿರ ರೂ. ಬಹುಮಾನ ಘೋಷಿಸಿದರು.
    ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಕಾಸರಗೋಡು ಡಿವೈಎಸ್‌ಪಿ ಸುಧಾಕರನ್, ಇನ್ಸ್‌ಪೆಕ್ಟರ್ ಪ್ರೇಮ್ ಸದನ್, ಸಬ್ ಇನ್ಸ್‌ಪೆಕ್ಟರ್ ಅಜಿತ್ ಪಿ.ಕೆ, ಸಿಬ್ಬಂದಿ ನಿಜಿನ್ ಕುಮಾರ್, ರಜೇಶ್ ಕಟ್ಟಂಪಲ್ಲಿ ಉಪಸ್ಥಿತರಿದ್ದರು.