ಎನ್.ಆರ್.ಪುರದ ಬಸ್ತಿಮಠದಲ್ಲಿ ಜೈನ ಸಾಹಿತಿ ಡಾ. ಎಸ್.ಪಿ.ಪದ್ಮಪ್ರಸಾದ್ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಹಾಗೂ ಭಾನುಕೀರ್ತಿ ಸ್ವಾಮೀಜಿ, ಇತರರಿದ್ದರು. 
ಜಿಲ್ಲೆ

ಬಸ್ತಿ ಮಠದಿಂದ ಜ್ವಾಲಾ ಜ್ಞಾನ ಜ್ಯೋತಿ ಪ್ರಶಸ್ತಿ

ಎನ್.ಆರ್.ಪುರ: ಸಾಹಿತ್ಯ ಮತ್ತು ಜೈನ ಜನಪದ ಸಾಹಿತಿಗಳನ್ನು ಗುರ್ತಿಸಿ ‘ಜ್ವಾಲಾ ಜ್ಞಾನ ಜ್ಯೋತಿ’ ಎಂಬ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸ್ತಿಮಠದ ಶ್ರೀ ಅಭಿನವ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಹೇಳಿದರು.

ಬಸ್ತಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೈನ ಜನಪದ ಸಾಹಿತಿ ಡಾ. ಎಸ್.ಪಿ.ಪದ್ಮಪ್ರಸಾದ್ ದಂಪತಿಯನ್ನು ಸನ್ಮಾನಿಸಿ ಮಾತನಾಡಿ, ಜೈನ ಧರ್ಮ ಪ್ರಾಚೀನವಾದುದು. ಅಹಿಂಸಾ ಮಾರ್ಗ ಪಾಲಿಸುತ್ತದೆ. ಇಂಥ ಧರ್ಮದಲ್ಲಿ ಸಾಹಿತಿಗಳು ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸನ್ಮಾನ ಸ್ವೀಕರಿಸಿದ ಸಾಹಿತಿ ಡಾ. ಎಸ್.ಪಿ.ಪಪದ್ಮಪ್ರಸಾದ್ ಮಾತನಾಡಿ, ಅನಾದಿ ಕಾಲದಿಂದಲೂ ಜೈನರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 368 ಜೈನ ಕವಿಗಳು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೈನ ಸಮುದಾಯದವರಲ್ಲಿ ಅಪಾರ ಜ್ಞಾನ ಅಡಗಿದೆ. ಸಾಧಿಸಬೇಕೆಂಬ ಛಲ ಬೇಕಾಗಿದೆ. ಮಠದಲ್ಲಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸನ್ಮಾನಿಸಿರುವುದು ಸಂತಸ ತಂದಿದೆ ಎಂದರು.
ಕಂಬದಹಳ್ಳಿ ಜೈನ ಮಠದ ಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ತಾವು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಡಾ. ಎಸ್.ಪಿ.ಪದ್ಮಪ್ರಸಾದ್ ಅವರು ಕನ್ನಡದ ವ್ಯಾಕರಣದ ಗುರುಗಳಾಗಿದ್ದರು. ಅಪಾರ ಪಾಂಡಿತ್ಯ ಹೊಂದಿದ್ದರು. ಶಿಸ್ತಿನ ಸಿಪಾಯಿಯಾಗಿದ್ದರು. ಹೊಂಬುಜದ ಕುಂದ-ಕುಂದ ವಿದ್ಯಾಪೀಠದಲ್ಲಿ ಗುರುಕುಲ ಶಿಕ್ಷಕರಾಗಿದ್ದರು ಎಂದು ಹೇಳಿದರು. ಮಠದ ಸಿಬ್ಬಂದಿ, ಸಮುದಾಯದವರು ಇದ್ದರು.