ಚಿಕ್ಕಬಳ್ಳಾಪುರ: ಶೋಷಣೆ ಮತ್ತು ದೌರ್ಜನ್ಯದ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಿದಾಗ ನ್ಯಾಯ ಸಿಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿ.ಪಂ ವತಿಯಿಂದ ಶುಕ್ರವಾರ ಕೈಗೊಂಡಿದ್ದ ವಿಧಾನ್ ಸೇ ಸಮಾಧಾನ್ ಹಾಗೂ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯದ ಕೆಲ ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಸುಳ್ಳು ಹೇಳಿಕೆಗಳನ್ನು, ದಾಖಲೆಗಳನ್ನು ಕೊಡುವುದರಿಂದ ಕೆಲವೊಮ್ಮೆ ಅಪರಾಧಿಗಳು ಶಿಕ್ಷೆಯಿಂದ ತಪ್ಪಿ ಹೋಗುತ್ತಾರೆ. ಹಾಗೆಯೇ ಕೆಲವರಿಗೆ ಅನಗತ್ಯ ಕಿರುಕುಳ ನೀಡುವ ದೂರುಗಳ ಸಲ್ಲಿಕೆಯಾಗುತ್ತವೆ. ಇದರಲ್ಲಿ ಸಂಬಂಧಪಡದವರನ್ನು ಸೇರ್ಪಡೆಗೊಳಿಸಲಾಗುತ್ತದೆ. ಇದರಿಂದ ತಪ್ಪೆಸಗದವರಿಗೆ ಅನ್ಯಾಯವಾಗುತ್ತದೆ. ಇದು ಅಕ್ಷಮ್ಯ ಅಪರಾಧ ಎಂದರು.
ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮಹತ್ವ, ಸಮಸ್ಯೆಗಳ ನಿವಾರಿಸುವ ನಿಟ್ಟಿನಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭ್ರೂಣ ಹತ್ಯೆ, ಬಾಲ್ಯ ವಿವಾಹ, ಪೋಕ್ಸೋ ಪ್ರಕರಣ, ಅಪಹರಣ, ಲೈಂಗಿಕ ದೌರ್ಜನ್ಯದಂತಹ ಅಪರಾಧಗಳನ್ನು ತಡೆಯಲು 1098 ಮತ್ತು 112 ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪೊಲೀಸ್ ಇಲಾಖೆಯು ದೂರುಗಳು ಸ್ವೀಕರಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಮತ್ತಿತರರು ಇದ್ದರು.
*ಕಾನೂನು ಕಾಯ್ದೆಗಳ ಅರಿವು*
ಭಾರತೀಯ ನ್ಯಾಯ ಸಂಹಿತೆಯ ಕಾನೂನು, ಮಹಿಳೆಯರ ಮೇಲೆ ಆಸಿಡ್ ದಾಳಿ, ಅತ್ಯಾಚಾರ, ಅಪಹರಣ, ಲೈಂಗಿಕ ದೌರ್ಜನ್ಯದಂತಹ ಅಪರಾಧಗಳ ತಡೆಗಟ್ಟುವಿಕೆ ಹಾಗೂ ಮಹಿಳೆಯರ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪ ಮಾಹಿತಿ ನೀಡಿದರು.
ಮಹಿಳಾ ಸಬಲೀಕರಣ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ, ಕುರಿತು ವಿಚಾರವಾಗಿ ಬಚ್ ಪನ್ ಬಚಾವೋ ಆಂದೋಲನ ಕಾರ್ಯಕ್ರಮ ರಾಜ್ಯ ಸಂಯೋಜಕ ಬಿನು ವರ್ಗೀಸ್, ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಲೋ ಕಾಯ್ದೆ ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಕಾರ್ಖಾನೆಗಳ ಕಾಯ್ದೆ- 1948ರಡಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಕುರಿತು ವಕೀಲ ನಾರಾಯಣಸ್ವಾಮಿ ಉಪನ್ಯಾಸ ನೀಡಿದರು.