ಬೆಳಗಾವಿ: ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್‌ಸಿ, ಎಸ್ಟಿ(ದೌರ್ಜನ್ಯ ನಿಯಂತ್ರಣ) ನಿಯಮಗಳನ್ವಯ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್‌ಸಿ, ಎಸ್ಟಿ ಜನರ ಮೇಲಿನ ದೌರ್ಜನ್ಯ ಅಧಿನಿಯಮ ಅನ್ವಯ ದಾಖಲಾದ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಮಂಜೂರು ಮಾಡಲಾಗಿದೆ.
ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿಲ್ಲ ಎಂದು ತಿಳಿಸಿದರು. ಸ್ಮಶಾನಕ್ಕೆ ಜಾಗ ನೀಡುವ ಪ್ರಕ್ರಿಯೆ ನಡೆದಿದ್ದು, ಜಮೀನು ಲಭ್ಯವಿರುವ ಕಡೆ ಭೂಮಿ ಖರೀದಿಸಲಾಗುವುದು. ಲಭ್ಯವಿರುವ ಸ್ಮಶಾನಭೂಮಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು. ವಿಜಯ ತಳವಾರ ಮಾತನಾಡಿ, ರಾಜಕೀಯ ಒತ್ತಡಕ್ಕೆ ಮಣಿದು ಕೆಲ ಪ್ರಕರಣಗಳನ್ನು ಬೆಳಕಿಗೆ ತರಲಾಗುತ್ತಿಲ್ಲ. ಈ ಬಗ್ಗೆ ಆಯುಕ್ತರು ಗಮನಹರಿಸಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ನಗರದ ಕೆಲವು ಮಾರ್ಗಗಳಿಗೆ ವಿವಿಧ ನಾಯಕರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಅದೇ ಮಾದರಿಯಲ್ಲಿ ನಗರದ ಒಂದು ರಸ್ತೆಗೆ ವೀರ ಮದಕರಿ ನಾಯಕರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದರು.
ಜಿಪಂ ಸಿಇಒ ಎಚ್.ವಿ.ದರ್ಶನ, ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಇತರರಿದ್ದರು.
ದೌರ್ಜನ್ಯ ಅಧಿನಿಯಮ ಹಾಗೂ ಇಲಾಖೆಯ ವತಿಯಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಸುವರ್ಣ ವಿಧಾನಸೌಧದಲ್ಲಿ ಮಾ.19ರಂದು ಬೆಳಗಾವಿ ವಿಭಾಗಮಟ್ಟದ ಕಾರ್ಯಾಗಾರ ಆಯೋಜಿಸಲಾಗುವುದು.| ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ