ಜಿಲ್ಲೆ

ಹಲವು ರೋಗಗಳಿಗೆ ಜಂಕ್‌ಫುಡ್ ಕಾರಣ: ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ. ಪ್ರಸನ್ನಕುಮಾರ್ ಕಳವಳ

ಮೈಸೂರು: ಬಹುತೇಕ ರೋಗಳಿಗೆ ನಾವು ತಿನ್ನುವ ಆಹಾರ ಕೂಡ ಅದರಲ್ಲೂ ಜಂಕ್‌ಫುಡ್ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಆಹಾರ ಸೇವನೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಜೆ.ಪ್ರಸನ್ನಕುಮಾರ್ ಸಲಹೆ ನೀಡಿದರು.

ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಮತ್ತು ವೈದ್ಯ ವಾರ್ತಾ ಪ್ರಕಾಶನದಿಂದ ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅರಕಲಗೂಡು ನೀಲಕಂಠಮೂರ್ತಿ ಅವರ ‘ಸಮಯದ ನೀರು ಮತ್ತೆ ಹರಿಯುವ ಹೊತ್ತು’, ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು, ಮುಖದಿಂದೆದ್ದು ಎತ್ತಲೋ ನಡೆದ ಕಣ್ಣು’ ಕೃತಿಗಳನ್ನು ಕುರಿತು ಮಾತನಾಡಿದರು.

ಆಹಾರ ಔಷಧವಾಗಬೇಕು. ಆದರೆ, ಇತ್ತೀಚಿನ ನಮ್ಮ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಔಷಧವೇ ಆಹಾರವಾಗುತ್ತಿದೆ. ಆದ್ದರಿಂದ ಬಹುತೇಕ ರೋಗಳಿಗೆ ನಾವು ತಿನ್ನುವ ಆಹಾರ ಕಾರಣವಾಗಿದ್ದು ಮುಖ್ಯವಾಗಿ ಜಂಕ್‌ಫುಡ್ ಎನ್ನುವುದನ್ನು ಮರೆಯಬಾರದು. ಹಾಗಾಗಿ, ಆಹಾರ ಸೇವನೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಕಷ್ಟಕರವಾದ ವೈದ್ಯಕೀಯ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಡಾ.ಅರಕಲಗೂಡು ನೀಲಕಂಠಮೂರ್ತಿ ಅವರು ಅತ್ಯಂತ ಸರಳವಾಗಿ ಬರೆದಿದ್ದಾರೆ. ದ್ವಿಗರ್ಭಾಶಯ ಕೇವಲ ಶೇ.0.3 ಪ್ರತಿಶತ ಮಹಿಳೆಯರಲ್ಲಿ ಕಂಡುಬರುವ ಜನ್ಮಜಾತ ವೈಕಲ್ಯ. ಇದರ ಲಕ್ಷಣ ಮತ್ತು ಕಾರಣಗಳನ್ನು, ರೋಗ ಪರೀಕ್ಷೆ ಮತ್ತು ಚಿಕಿತ್ಸಾ ವಿಧಾನಗಳನ್ನು ಅತ್ಯಂತ ಕುತೂಹಲಕಾರಿಯಾಗಿಯೂ ಬರೆದಿದ್ದಾರೆ. ಇದು ವೈದ್ಯರ ಹಾಗೂ ಓದಿದವರ ಜ್ಞಾನವನ್ನು ಕೂಡ ಹೆಚ್ಚಿಸುತ್ತದೆ ಎಂದರು.

ಕೊಬ್ಬಿನ ಕಥೆ, ಅತಿ ಕ್ರಿಯಾಶೀಲ ಮೂತ್ರಕೋಶ, ಬೆಲ್ಸ್ ಪಾಲ್ಸಿ, ಬೆವರು, ಗುದರೋಗಗಳು, ಮೂತ್ರಪಿಂಡದ ಕಲ್ಲುಗಳು, ಅತಿ ನಿದ್ರಾರೋಗ, ನಿದ್ರಾಭಂಗ ಶ್ವಾಸಸ್ತಂಭನ, ಸಿಕಲ್‌ಸೆಲ್ ಅನಿಮಿಯಾ ಕುರಿತು ಕೂಡ ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಎಂದು ತಿಳಿಸಿದರು.

ಎಪ್ಪತ್ತರ ದಶಕದಲ್ಲಿ ಸತತ 13 ವರ್ಷಗಳ ಕಾಲ ಸೋಮಲಿಯಾ ದೇಶದಲ್ಲಿ ಸೇವೆ ಸಲ್ಲಿಸಿದ್ದ ಡಾ.ನೀಲಕಂಠಮೂರ್ತಿ ಅವರು ‘ಕಗ್ಗತ್ತಲ ಖಂಡದಲ್ಲಿ’ ಎಂಬ ಕೃತಿಯಲ್ಲಿ ಅಲ್ಲಿನ ಪರಿಸ್ಥಿತಿಯನ್ನು ತುಂಬ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇದಾದ ನಂತರ ಈಗ ಎರಡು ಕವನಗಳನ್ನು ರಚಿಸಿದ್ದು, ಅವುಗಳು ಕೂಡ ಉತ್ತಮ ವಸ್ತಗಳನ್ನು ಹೊಂದಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಸಾಹಿತ್ಯ ಬರವಣಿಗೆ ಕಷ್ಟಕರ. ಪ್ರತಿ ವಾಕ್ಯ, ಪ್ರತಿ ಪದವನ್ನು ಯೋಚಿಸಿ, ಮರುಪರಿಶೀಲಿಸಿ, ತಿದ್ದಿ ಬರೆಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯನ ದೇಹ ರಚನೆ ನಿಗೂಢ ಪ್ರಕ್ರಿಯೆ. ಅದರಲ್ಲೂ ಮಹಿಳೆಯರು ದೇಹರಚನೆ ಸಂಕೀರ್ಣವಾಗಿರುತ್ತದೆ. ಮಹಿಳೆ ಮಗುವಿಗೆ ಜನ್ಮ ನೀಡಬೇಕಾಗುತ್ತದೆ. ಹೀಗಿರುವಾಗ ಅಪರೂಪದ ಎರಡು ಗರ್ಭಕೋಶಗಳಿರುವ ಪ್ರಕರಣದ ಬಗ್ಗೆ ಬರೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರವೂ ವ್ಯಾಪಾರೀಕರಣವಾಗಿದೆ. ಹೀಗಿರುವಾಗ ಇನ್ನೂ ಕೂಡ ಅಲ್ಲಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ವೈದ್ಯರು ಸೇವೆ ಮಾಡುತ್ತಿದ್ದಾರೆ. ಮನುಷ್ಯನಿಗೆ ಗಾಳಿ ಮತ್ತು ನೀರು ತುಂಬ ಮುಖ್ಯ. ಆದ್ದರಿಂದ ನೀರಿನ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಾಹಿತ್ಯ ರಚನೆಯಲ್ಲಿ ಬೇರೆ ಕ್ಷೇತ್ರಗಳವರು ತೊಡಗಿಸಿಕೊಂಡಾಗ ಮಾತ್ರ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯಾಗುತ್ತದೆ. ವೈದ್ಯರಾದವರು ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಅಪರೂಪದ ಕೃತಿಗಳನ್ನು ನೀಡುತ್ತಿದ್ದಾರೆ ಎಂದರು.

ವೈದ್ಯವಾರ್ತಾ ಪ್ರಕಾಶನದ ನಿರ್ದೇಶಕ ಎಚ್‌ಎಂಟಿ ಲಿಂಗರಾಜೇ ಅರಸು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಡಾ.ಎಂಜಿಆರ್ ಅರಸು, ಸಂಘಟಕರಾದ ಎಂ.ನಟರಾಜ್, ಡಾ.ಕೆ.ಎಸ್.ಉಮಾಶಂಕರ್ ಇತರರು ಇದ್ದರು.