ಜಿಲ್ಲೆ

19, 20 ತುಮಕೂರು ವಿವಿಯಲ್ಲಿ ಇಂಪ್ರೆಶನ್​-2024

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಜು.19 ಹಾಗೂ 20ರಂದು ವಿಕಸಿತ್​ ಭಾರತ್​&2047: ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಡಿಜಿಟಲ್​ ರೂಪಾಂತರ ಮತ್ತು ಮಾಧ್ಯಮ ಸಂಗಮದ ಪಾತ್ರ ಕುರಿತ ರಾಷ್ಟ್ರೀಯ ಸಮ್ಮೇಳನ ಹಾಗೂ ಮಾಧ್ಯಮ ಹಬ್ಬ ಇಂಪ್ರೆಶನ್​-2024 ಹಮ್ಮಿಕೊಂಡಿದೆ.

ಸಮ್ಮೇಳನವನ್ನು 19ರಂದು ಬೆಳಗ್ಗೆ 10-ಕ್ಕೆ ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಸಹ ಕುಲಪತಿ ಪ್ರೊ.ಕೆ.ವಿ.ನಾಗರಾಜ್​ ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪತ್ರಕರ್ತ ಎ.ಹರಿಪ್ರಸಾದ್​ ಮಾಧ್ಯಮ ಹಬ್ಬಕ್ಕೆ ಚಾಲನೆ ನೀಡುವರು. ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೊಪ್ಪಳ ವಿವಿ ಕುಲಪತಿ ಪ್ರೊ ಬಿ.ಕೆ.ರವಿ ಮೀಡಿಯಾ ಲಿಟೆರೆಸಿ ಇನ್​ ದಿ ಟಿಜಿಟಲ್​ ಇರಾ ಎಂಬ ಸಂಪಾದಿತ ಪುಸ್ತಕ ಬಿಡುಗಡೆ ಮಾಡುವರು. ಭಾರತೀಯ ಸಂವಹನ ಕಾಂಗ್ರೆಸ್​ ಅಧ್ಯಕ್ಷ, ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪ್ರಾಧ್ಯಾಪಕ ಪ್ರೊ. ಬಿಪ್ಲಬ್​ ಲೋಹೋ ಚೌಧರಿ ಸಮ್ಮೇಳನದ ಪ್ರಬಂಧ ಸಾರಲೇಖಗಳ ಕೈಪಿಡಿ ಬಿಡುಗಡೆ ಮಾಡುವರು.

ಒಡಿಶಾದ ಉತ್ಕಲ್​ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಉಪೇಂದ್ರ ಪಾಢಿ, ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್​ ಜಮ್​, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​ ಭಾಗವಹಿಸುವರು. ಭೋಪಾಲ್​ನ ಮಖನ್​ಲಾಲ್​ ಚತುರ್ವೇದಿ ಪತ್ರಿಕೋದ್ಯಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಜಿ. ಸುರೇಶ್​ ಭಾರತದಲ್ಲಿ ಡಿಜಿಟಲ್​ ಪರಿವರ್ತನೆಗೆ ಮಾಧ್ಯಮ ಸಾಕ್ಷರತೆಯ ಅಗತ್ಯ ಕುರಿತು ವಿಶೇಷ ಉಪನ್ಯಾಸ ನೀಡುವರು.

ಮಾಧ್ಯಮ ಹಬ್ಬದ ಅಂಗವಾಗಿ ರಾಜ್ಯದ ವಿವಿಧ ಕಾಲೇಜು ಹಾಗೂ ವಿವಿಗಳ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು ನಡೆಯಲಿವೆ. ಜು.20 ರಂದು ಸಂಜೆ 4ಕ್ಕೆ ಸಮ್ಮೇಳನದ ಹಾಗೂ ಮಾಧ್ಯಮ ಹಬ್ಬದ ಸಮಾರೋಪ ಸಮಾರಂಭದ ನಡೆಯಲಿದ್ದು, ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಸಮಾರೋಪ ಭಾಷಣ ನೆರವೇರಿಸುವರು.