ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಆದಿವಾಸಿ ಮಲೆಕುಡಿಯ ಸಮುದಾಯದ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ದಳ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಘಟನೆಯ ಎರಡು ದಿನಗಳ ಮೊದಲು ಆ ಪ್ರದೇಶದ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳ ನಿವಾಸಿಗಳನ್ನು ತೆರವು ಮಾಡಿದ್ದರೂ ಇಂದಿಗೂ ಅದನ್ನು ಆದಿವಾಸಿಗಳಿಗೆ ಬಿಟ್ಟು ಕೊಡದೆ ಅಸಾಂವಿಧಾನಿಕವಾಗಿ ನಡೆದುಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ, ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಹೇಳಿದ್ದಾರೆ.
ಸಂಶಯಕ್ಕೆ ಎಡೆಮಾಡಿಕೊಟ್ಟ ಎನ್‌ಕೌಂಟರ್ ಬಗ್ಗೆ ಇಂದಿಗೂ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡದೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಎನ್‌ಕೌಂಟರ್ ನಡೆದು 15 ದಿನಗಳಾದರೂ ಇಂದಿಗೂ ತಮ್ಮ ಮನೆಗಳಿಗೆ ಆದಿವಾಸಿಗಳ ಪ್ರವೇಶವನ್ನು ನಿರ್ಬಂಧಿಸಿರುವ ರಾಜ್ಯ ಸರ್ಕಾರದ ನಡೆ ಅಮಾನವೀಯತೆಯ ಸಂಕೇತವಾಗಿದೆ. ರಾಜ್ಯ ಸರ್ಕಾರವನ್ನು ಎಎನ್‌ಎಫ್ ಆಳ್ವಿಕೆ ಮಾಡುತ್ತಿದೆಯೋ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಎಎನ್‌ಎಫ್ ಕೆಲಸ ಮಾಡುತ್ತಿದೆಯೋ ಎಂಬ ಸಂಶಯ ಕಾಡುತ್ತಿದೆ ಎಂದು ಹೇಳಿದ್ದಾರೆ.
ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್‌ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣವಾಗಿದೆ. ಎನ್‌ಕೌಂಟರ್ ನಡೆದ ಸ್ಥಳಕ್ಕೆ ಮಾಧ್ಯಮದವರಿಗೆ ಪ್ರವೇಶ ನೀಡದೆ, ಶವ ನೋಡಲು ಬಿಡದೆ ನಕ್ಸಲ್ ನಿಗ್ರಹ ದಳ ಅಸಾಂವಿಧಾನಿಕವಾಗಿ ನಡೆದುಕೊಂಡಿದೆ. ಮನೆಯಲ್ಲಿ ಎನ್‌ಕೌಂಟರ್ ನಡೆದಿದೆ ಎನ್ನುವ ಪೊಲೀಸ್ ಇಲಾಖೆ ಎಫ್‌ಐಆರ್‌ನಲ್ಲಿ ಕಾಡಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಮ್ ಗೌಡ ಸಾವನ್ನಪ್ಪಿದ್ದಾನೆ ಎಂದು ದಾಖಲಿಸಿರುವುದು ಶತಮಾನದ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದಿದ್ದಾರೆ.
ಕಾಡಿನಲ್ಲಿ ಎನ್‌ಕೌಂಟರ್ ನಡೆದಿದ್ದು ನಿಜವಾದರೆ ಮಲೆಕುಡಿಯ ಸಮುದಾಯವನ್ನು ಅವರ ಮನೆಗಳಿಂದ ತೆರವು ಮಾಡಿದ್ಯಾಕೆ? ಎನ್‌ಕೌಂಟರ್ ನಡೆದ 15 ದಿನಗಳ ಬಳಿಕವೂ ಅವರ ಮನೆಗಳಿಗೆ ತೆರಳಲು ಅವಕಾಶ ನೀಡದಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳಲ್ಲಿ ಅನಧಿಕೃತವಾಗಿ ನೆಲೆಸಿರುವ ಎಎನ್‌ಎಫ್ ಸಿಬ್ಬಂದಿಯನ್ನು ತೆರವುಗೊಳಿಸಿ ಆದಿವಾಸಿಗಳನ್ನು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಸಂಶಯಕ್ಕೆ ಎಡೆಮಾಡಿಕೊಟ್ಟಿರುವ ವಿಕ್ರಂ ಗೌಡ ಎನ್‌ಕೌಂಟರ್ ಬಗ್ಗೆ ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಎನ್‌ಕೌಂಟರ್ ನಡೆಸಿದ ಎಎನ್‌ಎಫ್ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.