* ಅಪಘಾತದಲ್ಲಿ ಕಾಲಿಗೆ ಪೆಟ್ಟು
* ಕೋರ್ಟ್ ಮೆಟ್ಟಿಲು ಹತ್ತಲಾಗದೆ ಹೊರಗೆ ಕುಳಿತಿದ್ದ ಯಶೋದಮ್ಮ
ರಾಮನಗರ
ಅಪಘಾತ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆ, ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ಕೋರ್ಟ್ ಮೆಟ್ಟಿಲು ಹತ್ತಿ ಒಳ ಹೋಗಲಾದರೆ ಹೊರಗೆ ಕುಳಿತಿರುವುದನ್ನು ತಿಳಿದ ನ್ಯಾಯಾಧೀಶರೇ, ಮಹಿಳೆ ಇದ್ದಲ್ಲಿಗೆ ಹೋಗಿ ವಿಚಾರಣೆ ನಡೆಸಿದ ವಿಶೇಷ ಸಂದರ್ಭಕ್ಕೆ ರಾಮನಗರದ ಕೋರ್ಟ್ ಆವರಣ ಸಾಕ್ಷಿಯಾಯಿತು.
ವಿಚಾರಣೆಗೆ ಬಂದಿದ್ದ ಯಶೋದಮ್ಮ ಅವರ ಕಾಲಿಗೆ ಪೆಟ್ಟು ಬಿದ್ದಿದ್ದ ಕಾರಣ ಹೊರಗೆ ಕುಳಿತಿದ್ದರು. ಇದನ್ನು ತಿಳಿದ ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಚ್. ಅವಿನಾಶ್ ಚಿಂದು, ಮಹಿಳೆಯ ಇದ್ದ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿ, ಪರಿಹಾರಕ್ಕೆ ಆದೇಶ ನೀಡಿದರು.
ಏನಿದು ಪ್ರಕರಣ?: ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಚಲುವಯ್ಯ ಎಂಬುವರು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಆರೋಪಿ ಸಂಜಯ್ ಕಲಾರೊ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಕೋರ್ಟ್, ಚಲುವಯ್ಯ ಅವರ 10 ಮಕ್ಕಳಿಗೆ ತಲಾ -್ಝಠಿ;1 ಲಕ್ಷದಂತೆ -್ಝಠಿ;10 ಲಕ್ಷ ಪರಿಹಾರವನ್ನು ಆರೋಪಿ ನೀಡಬೇಕು ಎಂದು ಆದೇಶಿಸಿತ್ತು. ಬೆಂಗಳೂರು ದಕ್ಷಿಣ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಪರಿಹಾರದ ಹಣವನ್ನು ರಾಮನಗರದ ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗಿತ್ತು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ಮೃತರ ವಾರಸುದಾರರಿಗೆ ತಲಾ 1 ಲಕ್ಷವನ್ನು ಪರಿಹಾರವಾಗಿ ನೀಡಲು ಆದೇಶಿಸಿದರು. ಈ ಪೈಕಿ, ಚಲುವಯ್ಯ ಅವರ ಪುತ್ರಿ ಯಶೋದಮ್ಮ ಅವರಿಗೆ ಅಪಘಾತದಲ್ಲಿ ಕಾಲಿಗೆ ಪೆಟ್ಟು ಬಿದ್ದಿತ್ತು.
ವಿಚಾರಣೆಗೆ ಬಂದಿದ್ದ ಅವರಿಗೆ ಕೋರ್ಟ್ ಮೆಟ್ಟಿಲು ಹತ್ತಿ ಒಳಕ್ಕೆ ಬರಲು ಸಾಧ್ಯವಾಗದೆ, ಹೊರಗೆ ನೋಟರಿ ಬಳಿ ಕುಳಿತಿದ್ದರು. ವಿಷಯ ತಿಳಿದ ನ್ಯಾಯಾಧೀಶರು ಯಶೋದಮ್ಮ ಅವರಿದ್ದ ಜಾಗಕ್ಕೆ ಬಂದು ವಿಚಾರಣೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿ ಪರಿಶೀಲಿಸಿದರು. ಬಳಿಕ, ಪರಿಹಾರ ಹಣ ಬಿಡುಗಡೆಗೆ ಆದೇಶ ನೀಡಿದರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.